ದೇಶ

ಕೇರಳದಲ್ಲಿ ರಾಜಕೀಯ ಹಿಂಸಾಚಾರ: ಆಗಸ್ಟ್ 6ಕ್ಕೆ ಸರ್ವಪಕ್ಷ ಸಭೆ

Lingaraj Badiger
ತಿರುವನಂತಪುರಂ: ರಾಜ್ಯದಲ್ಲಿ ಪದೇಪದೆ ರಾಜಕೀಯ ಘರ್ಷಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಆಗಸ್ಟ್ 6ರಂದು ಸರ್ವ ಪಕ್ಷ ಸಭೆ ಕರೆಯಲು ಸೋಮವಾರ ನಿರ್ಧರಿಸಿದೆ.
ಇಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನೇತೃತ್ವದಲ್ಲಿ ನಡೆದ ಸಿಪಿಎಂ, ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಆಗಸ್ಟ್ 6ರಂದು ರಾಜ್ಯ ರಾಜಧಾನಿಯಲ್ಲಿ ಸರ್ವಪಕ್ಷ ಸಭೆ ಹಾಗೂ ಆಗಸ್ಟ್ 1ರಂದು ತಿರುವನಂತಪುರಂ ಮತ್ತು ಆಗಸ್ಟ್ 5ರಂದು ಕೊಟ್ಟಾಯಂ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ನಾಯಕರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ.
ನಿನ್ನೆ ತಿರುವನಂತಪುರಂನಲ್ಲಿ ಆರ್ಎಸ್ ಎಸ್ ಕಾರ್ಯಕರ್ತನ ಹತ್ಯೆಯ ಹಿನ್ನೆಲೆಯಲ್ಲಿ ಸಿಪಿಎಂ ಮತ್ತು ಬಿಜೆಪಿ ನಾಯಕರು ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದಾರೆ.
ಹಿಂಸಾಚಾರದಲ್ಲಿ ತೊಡಗದಂತೆ ಎಲ್ಲಾ ಪಕ್ಷಗಳ ಕಾರ್ಯಕರ್ತರಿಗೆ ಸೂಚಿಸಬೇಕು ಮತ್ತು ಈ ಕುರಿತು ಪಕ್ಷದ ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸಲು ಯತ್ನಿಸಲಾಗುವುದು ಎಂದು ಸಭೆಯ ನಂತರ ಪಿಣರಾಯ್ ವಿಜಯನ್ ಅವರು ತಿಳಿಸಿದ್ದಾರೆ.
ರಾಜಕೀಯ ಹಿಂಸಾಚಾರವನ್ನು ತಡೆಯುವಲ್ಲಿ ವಿಫಲವಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನ್ ರಾಜಶೇಖರನ್ ಅವರು ಹೇಳಿದ್ದಾರೆ.
SCROLL FOR NEXT