ಗುಜರಾತ್ ನ ಮಾಜಿ ಪೊಲೀಸ್ ಅಧಿಕಾರಿ ಡಿ.ಜಿ.ವಂಝಾರ
ನವದೆಹಲಿ: ಸೊಹ್ರಬುದ್ದೀನ್ ಶೇಖ್ ಎನ್ ಕೌಂಟರ್ ಕೇಸಿನಲ್ಲಿ ಸಿಬಿಐ ನ್ಯಾಯಾಲಯ ಇಂದು ನಿವೃತ್ತ ಪೊಲೀಸ್ ಅಧಿಕಾರಿ ಡಿಜಿ ವಂಝಾರ ಮತ್ತು ಎಂಎನ್ ದಿನೇಶ್ ಅವರನ್ನು ಬಿಡುಗಡೆ ಮಾಡಿದೆ.
ವಂಝಾರ ಅಂದು ಗುಜರಾತ್ ನ ಭ್ರಷ್ಟಾಚಾರ ವಿರೋಧಿ ಪಡೆಯ ಮುಖ್ಯಸ್ಥರಾಗಿದ್ದರು. ಐಪಿಎಸ್ ಅಧಿಕಾರಿಯಾಗಿರುವ ದಿನೇಶ್ ರಾಜಸ್ತಾನ ಪೊಲೀಸ್ ಇಲಾಖೆಯಲ್ಲಿದ್ದರು. ಇದೀಗ ನ್ಯಾಯಾಲಯದಿಂದ ಖುಲಾಸೆಗೊಂಡ ಒಟ್ಟು ಆರೋಪಿಗಳ ಸಂಖ್ಯೆ 15 ಆಗಿದೆ.
ನಿನ್ನೆ ಸಿಬಿಐ ನ್ಯಾಯಾಲಯ ರಾಜಸ್ತಾನದ ಇಬ್ಬರು ಪೊಲೀಸ್ ಅಧಿಕಾರಿಗಳಾದ ಹಿಮಾಂಶು ಸಿಂಗ್ ಮತ್ತು ಶ್ಯಾಮ್ ಸಿಂಗ್ ಚರಣ್ ಅವರ ಬಿಡುಗಡೆ ಅರ್ಜಿಯನ್ನು ತಿರಸ್ಕರಿಸಿತ್ತು. ಕೇಸಿನಲ್ಲಿ ಆರೋಪಿಗಳಾಗಿರುವ ಇಬ್ಬರು ಪೊಲೀಸ್ ಅಧಿಕಾರಿಗಳು ಅಂದು ರಾಜಸ್ತಾನ ಪೊಲೀಸ್ ಇಲಾಖೆಯಲ್ಲಿದ್ದರು. ಅವರ ಖುಲಾಸೆಯನ್ನು ವಿರೋಧಿಸಿದ ಸಿಬಿಐ, ಅವರು ಪ್ರಕರಣದ ಮುಖ್ಯ ಆರೋಪಿಗಳಾಗಿದ್ದು, ಅವರು ಸೊಹ್ರಬುದ್ದೀನ್ ಶೇಖ್ ಮೇಲೆ ಗುಂಡಿನ ದಾಳಿ ನಡೆಸಿದವರಾಗಿದ್ದಾರೆ ಎಂದು ಸಿಬಿಐ ಹೇಳಿದೆ.
ವಿಚಾರಣೆಯನ್ನು ಗುಜರಾತ್ ಹೊರಗೆ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶದ ನಂತರ ಪ್ರಕರಣದ ವಿಚಾರಣೆಯನ್ನು ಮುಂಬೈಯಲ್ಲಿರುವ ವಿಶೇಷ ನ್ಯಾಯಾಲಯ ನಡೆಸುತ್ತಿದೆ. ಕೆರವು ಆರೋಪಿಗಳ ಬಿಡುಗಡೆ ಅರ್ಜಿ ವಿಚಾರಣೆ ಇನ್ನೂ ಬಾಕಿ ಉಳಿದಿದೆ. ಒಟ್ಟು 38 ವ್ಯಕ್ತಿಗಳು ಆರಂಭದಲ್ಲಿ ಕೇಸಿನಲ್ಲಿ ಆರೋಪಿಗಳಾಗಿದ್ದರು.
2005 ನವೆಂಬರ್ ನಲ್ಲಿ ಸೊಹ್ರಬುದ್ದೀನ್ ಶೇಖ್ ತನ್ನ ಪತ್ನಿ ಕೌಸರ್ಬಿ ಮತ್ತು ಸಹಚರ ತುಳಸೀರಾಮ್ ಪ್ರಜಾಪತಿ ಜೊತೆಗೆ ಹೈದರಾಬಾದಿನಿಂದ ಸಾಂಗ್ಲಿಗೆ ಹೋಗುವ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಪೊಲೀಸರ ತಂಡ ಬಸ್ಸನ್ನು ಬೆನ್ನಟ್ಟಿ ಮೂವರನ್ನೂ ಇಳಿಸಿ ಬಲವಂತವಾಗಿ ಅಹ್ಮದಾಬಾದ್ ಗೆ ಕರೆದುಕೊಂಡು ಹೋದರು. ಅಲ್ಲಿ ಸೊಹ್ರಬುದ್ದೀನ್ ತಪ್ಪಿಸಿಕೊಳ್ಳಲು ನೋಡುವಾಗ ಪೊಲೀಸರು ಗುಂಡಿಕ್ಕಿ ಕೊಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics