ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ ಕಾಶ್ಮೀರ, ಹರಿಯಾಣ ಸಹಿತ ರಾಷ್ಟ್ರದ 23 ಕಡೆಗಳಲ್ಲಿ ಪ್ರತ್ಯೇಕತಾವಾದಿ ನಾಯಕರಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ, 1.5 ಕೋಟಿ ರೂ. ನಗದು ವಶಪಡಿಸಿಕೊಂಡಿದೆ.
ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಕೆಲ ದಾಖಲೆಗಳನ್ನು ಎನ್ ಐ ಎ ವಶಕ್ಕೆ ಪಡೆದಿದೆ. ಪ್ರತ್ಯೇಕತಾವಾದಿ ಗುಂಪುಗಳಿಗೆ ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹಣ ಸರಬರಾಜು ಮಾಡಲಾಗಿದೆ ಎಂಬ ಆಪಾದನೆಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಎನ್ಐಎ, ಭಾರಿ ಭದ್ರತೆಯೊಂದಿಗೆ ದಾಳಿ ನಡೆಸಿದೆ.
ಕಳೆದ ಕೆಲ ದಿನಗಳಿಂದ ಕಾಶ್ಮೀರದಲ್ಲೇ ವಾಸ್ತವ್ಯ ಹೂಡಿರುವ ಎನ್ಐಎ ತಂಡಗಳು ಶ್ರೀನಗರದ ಹೊರಭಾಗದಲ್ಲಿನ ಹಂಹಾಮದಲ್ಲಿನ ಪ್ರದೇಶ, ಕೆಲ ಕಚೇರಿಗೆ ಭಾರಿ ಭದ್ರತೆಯೊಂದಿಗೆ ತೆರಳಿದ್ದವು.
ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರ ಅಳಿಯ ಅಲ್ತಾಫ್ ಫಂತೂಶ್, ಉದ್ಯಮಿ ಝುಹರ್ ವಟಾಲಿ, ಮಿರ್ವಾಜ್ ಉಮರ್ ಫಾರೂಕ್ ನೇತೃತ್ವದ ಅವಾಮಿ ಕ್ರಿಯಾ ಸಮಿತಿ ನಾಯಕ ಶಾಹಿದ್-ಉಲ್-ಇಸ್ಲಾಂ ಮತ್ತು ಹುರಿಯತ್ ಕಾನ್ಪರೆನ್ಸ್, ಜೆಕೆಎಲ್ಎಫ್ ಬಣಗಳ ಎರಡನೇ ಹಂತದ ಪ್ರತ್ಯೇಕತಾವಾದಿ ನಾಯಕರ ಮೇಲೆ ದಾಳಿ ನಡೆದಿದೆ.