ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸಿಆರ್‍ಪಿಎಫ್ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿ ನಡೆಸಲು ಯತ್ನ ನಡೆಸಿದ್ದ ನಾಲ್ವರು ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದು ನಂತರ ಯೋಧರು ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದಾರೆ.
ಇಂದು ಬೆಳಗಿನ ಜಾವ 4.10ರ ಸುಮಾರಿಗೆ ಸಿಆರ್‍ಪಿಎಫ್ ಕ್ಯಾಂಪ್ ಬಳಿ ಬಂದಿರುವ ಉಗ್ರರು ದಾಳಿ ನಡೆಸಲು ಯತ್ನ ನಡೆಸಿದ್ದಾರೆ. ಈ ವೇಳೆ ಜಾಗೃತರಾದ ಯೋಧರು ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿ ಹೊಡೆದುರುಳಿಸಿದ್ದಾರೆ.
ಬಂಡಿಪೋರಾದ ಸುಂಬಲ್ 45 ಬೆಟಾಲಿಯನ್ ಸಿಆರ್‍ಪಿಎಫ್ ಕ್ಯಾಂಪ್ ಮೇಲೆ ಉಗ್ರರ ಗುಂಪೊಂದು ದಾಳಿ ನಡೆಸಲು ಮುಂದಾಗಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಸೇನಾ ಪಡೆ ಉಗ್ರರ ಆತ್ಮಾಹುತಿ ದಾಳಿಯನ್ನು ವಿಫಲಗೊಳಿಸಿತ್ತು. ಸ್ಥಳದಲ್ಲಿ ನಾಲ್ಕು ಉಗ್ರರ ಶವಗಳು ಪತ್ತೆಯಾಗಿದೆ. ಅಲ್ಲದೆ, ಎಕೆ 47 ರೈಫಲ್ಸ್ ಗಳು, 1 ಯುಬಿಜಿಎಲ್ ಮತ್ತು ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.