ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್
ನವದೆಹಲಿ: ಸಿಆರ್'ಪಿಎಫ್ ಕ್ಯಾಂಪ್ ಮೇಲೆ ದಾಳಿ ನಡೆಯಲು ಯತ್ನ ನಡೆಸಿದ್ದ ಉಗ್ರರು ದೊಡ್ಡ ಮಟ್ಟದಲ್ಲಿಯೇ ದಾಳಿ ನಡೆಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿದ್ದರು ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸಿಆರ್ ಪಿಎಫ್ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿ ನಡೆಸಲು ಯತ್ನ ನಡೆಸಿದ್ದ ನಾಲ್ವರು ಉಗ್ರರನ್ನು ಭಾರತೀಯ ಸೇನಾ ಪಡೆ ಇಂದು ಬೆಳಿಗ್ಗೆ ಹತ್ಯೆ ಮಾಡಿತ್ತು.
ಉಗ್ರರ ದಾಳಿ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜನಾಥ ಸಿಂಗ್ ಅವರು, ಫಿದಾಯಿನ್ ಉಗ್ರರು ಸೇನಾ ಕ್ಯಾಂಪ್ ಮೇಲೆ ದೊಡ್ಡ ಮಟ್ಟದಲ್ಲಿಯೇ ದಾಳಿ ನಡೆಸುವ ಉದ್ದೇಶದೊಂದಿಗೆ ಬಂದಿದ್ದರು. ಉಗ್ರರ ಬಳಿ ದೊಡ್ಡ ಮಟ್ಟದಲ್ಲಿಯೇ ರೈಫಲ್ಸ್ ಗಳು, ಗ್ರನೇಡ್ ಗಳು, ಪೆಟ್ರೋಲ್, ಆಹಾರ-ಧಾನ್ಯಗಳನ್ನು ಹೊತ್ತು ತಂದಿದ್ದರು. ಉಗ್ರರ ಬಳಿಯಿದ್ದ ವಸ್ತುಗಳನ್ನು ಗಮನಿಸಿದರೆ, ಒತ್ತೆಯಾಳಾಗಿರಿಸಿಕೊಂಡು ದೊಡ್ಡ ಮಟ್ಟದಲ್ಲಿಯೇ ದಾಳಿಗೆ ಸಂಚು ರೂಪಿಸಿದ್ದರು ಎಂಬುದು ಸ್ಪಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.
ಗಡಿಯಲ್ಲಿರುವ ರಕ್ಷಣಾ ಬೇಟಿಯನ್ನು ಕತ್ತರಿಸಿ ಗುಂಡಿನ ದಾಳಿ ನಡೆಸುವ ಮೂಲಕ ಉಗ್ರರು ಒಳ ಬಂದಿದ್ದಾರೆ. ಈ ವೇಳೆ ಸೇನೆ ಉಗ್ರರಿಗೆ ದಿಟ್ಟ ಉತ್ತರವನ್ನೇ ನೀಡಿದ್ದು, ತಪ್ಪಿಸಿಕೊಳ್ಳುವ ಸಲುವಾಗಿ 24ಕ್ಕೂ ಹೆಚ್ಚು ಗ್ರೆನೇಡ್ ಗಳನ್ನು ಉಗ್ರರು ಸೇನೆ ಮೇಲೆ ಎಸೆದಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್ ಪಿಎಫ್ ಯೋಧರು ಕೆಚ್ಚೆದೆಯೊಂದಿಗೆ ಮುನ್ನುಗ್ಗಿ ಉಗ್ರರನ್ನು ಸದೆ ಬಡಿಯುವ ಮೂಲಕ ಅವರ ಯತ್ನವನ್ನು ವಿಫಲವಾಗುವಂತೆ ಮಾಡಿದ್ದಾರೆ.
ರಾತ್ರಿಯಿಡೀ ಸಿಆರ್ ಪಿಎಫ್ ಯೋಧರು ಕಾವಲಿದ್ದು, ಭದ್ರತೆಯನ್ನು ಒದಗಿಸಿರುವುದು ಪ್ರೇರಣೆಯಾಗಿದೆ. ಉಗ್ರರು ದಾಳಿ ನಡೆಸುತ್ತಿದ್ದಂತೆಯೇ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕೂಡ ಸೇನೆಯೊಂದಿಗೆ ಕೈಜೋಡಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸಿಆರ್ ಪಿಎಫ್ ಯೋಧರ ಜಂಟಿ ಕಾರ್ಯಾಚರಣೆ ಸೇನೆ ಕೀರ್ತಿಯನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics