ನವದೆಹಲಿ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ವಿರುದ್ಧ ಸಿಪಿಐ(ಎಂ) ಅಸಮಾಧಾನ ವ್ಯಕ್ತಪಡಿಸಿದ್ದು, ತನ್ನ ಮುಖವಾಣಿ ಪೀಪಲ್ಸ್ ಡೆಮಾಕ್ರೆಸಿಯಲ್ಲಿ ಲೇಖನ ಪ್ರಕಟಿಸಿದೆ.
ಜನರಲ್ ಬಿಪಿನ್ ರಾವತ್ ಅವರು ಭಾರತೀಯ ಸೇನೆಯ ಉನ್ನತ ವೃತ್ತಿಪರ ಮಾನದಂಡಗಳನ್ನು ಹಾಳುಗೆಡವಿದ್ದಾರೆ ಎಂದು ಸಿಪಿಐ(ಎಂ) ಟೀಕಿಸಿದೆ. ಪ್ರತಿಭಟನಾ ನಿರತ ಕಾಶ್ಮೀರಿಗಳನ್ನು ಮಾನವ ಗುರಾಣಿಗಳನ್ನಾಗಿ ಬಳಕೆ ಮಾಡಿದ್ದ ಮೇಜರ್ ಲೀತುಲ್ ಗೊಗೊಯ್ ಅವರನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಬಿಪಿನ್ ರಾವತ್ ವಿರುದ್ಧ ಸಿಪಿಐ(ಎಂ) ಅಸಮಾಧಾನ ವ್ಯಕ್ತಪಡಿಸಿದೆ.
ಡೆಮಾಕ್ರೆಸಿಯ ಸಂಪಾದಕೀಯ ಪುಟದಲ್ಲಿ ಬಿಪಿನ್ ರಾವತ್ ಅವರ ಬಗ್ಗೆ ಲೇಖನ ಪ್ರಕಟಿಸಿರುವ ಸಿಪಿಐ(ಎಂ) ಸೇನಾ ಮುಖ್ಯಸ್ಥರು, ಕಾಶ್ಮೀರಿ ಜನತೆಯ ಧ್ವನಿಯನ್ನು ಅಡಗಿಸುವ ಮೋದಿ ಸರ್ಕಾರದ ಉದ್ದೇಶಗಳನ್ನು ಪ್ರತಿಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದೆ. ಬಿಪಿನ್ ರಾವತ್ ಅವರು ಲೀತುಲ್ ಗೊಗೊಯ್ ಅವರ ಕ್ರಮವನ್ನು ಸಮರ್ಥಿಸಿದ ಬೆನ್ನಲ್ಲೇ ಸಿಪಿಐ(ಎಂ) ಪೀಪಲ್ಸ್ ಡೆಮಾಕ್ರೆಸಿಯಲ್ಲಿ ಲೇಖನ ಪ್ರಕಟಿಸಿದೆ.