ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್
ನವದೆಹಲಿ: ಜಾನುವಾರು ಹತ್ಯೆ ನಿಷೇಧ ಕಾನೂನು ಭಾರತದಲ್ಲಿ ಜಾನುವಾರು ಸಾಕಾಣೆಯ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದಿರುವ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, ಈ ಕಾಯ್ದೆಯ ವಿರುದ್ಧ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ.
ಕೃಷಿ ವಿಜ್ಞಾನಗಳ ರಾಷ್ಟ್ರೀಯ ಸಂಸ್ಥೆ (ಎನ್ ಎ ಎ ಎಸ್) ನಲ್ಲಿ ಸೋಮವಾರ ಸಂಜೆ ಮಾತನಾಡಿದ ಸುಬ್ರಮಣಿಯನ್, ಸಾಮಾಜಿಕ ನೀತಿಗಳನ್ನು ರೂಪಿಸಲು ಸರ್ಕಾರಕ್ಕೆ ಅಧಿಕಾರವಿದೆ ಆದರೆ ಅಂತಹ ನೀತಿಗಳಿಂದ ಉಂಟಾಗಬಲ್ಲ ಆರ್ಥಿಕ ನಷ್ಟವನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.
"ಹಾಲು ಉತ್ಪಾದನೆ ಮತ್ತು ಜಾನುವಾರು ಸಾಕಾಣೆ, ಈ ಎರಡು ಕ್ಷೇತ್ರಗಳ ಮೇಲೆ ಒತ್ತು ನೀಡುವುದು ಅವಶ್ಯಕ. ಸಾಮಾಜಿಕ ನೀತಿಗಳನ್ನು ರೂಪಿಸಲು ಸರ್ಕಾರಕ್ಕೆ ಅಧಿಕಾರವಿದೆ ಆದರೆ ಅಂತಹ ನೀತಿಗಳಿಂದ ಉಂಟಾಗಬಲ್ಲ ಆರ್ಥಿಕ ನಷ್ಟಗಳ ಬಗ್ಗೆ ಸಂಪೂರ್ಣ ಅರಿವಿರಬೇಕು.
"ಸಾಮಾಜಿಕ ನೀತಿಗಳು ಜಾನುವಾರು ಮಾರುಕಟ್ಟೆಯ ಕಾರ್ಯಚಟುವಟಿಕೆಗಳಿಗೆ ಹೊಡೆತ ನೀಡಿದರೆ, ಜಾನುವಾರು ಸಾಕಣೆ ಕ್ಷೇತ್ರದ ಆರ್ಥಿಕತೆಗೆ ಅದು ಒಡ್ಡಬಲ್ಲ ತೊಂದರೆ ದುಬಾರಿಯಾಗಲಿದೆ. ಇದನ್ನು ಲೆಕ್ಕ ಹಾಕಿ, ಸರಿಯಾದ ಆಯ್ಕೆ ಮಾಡಬೇಕಾಗುತ್ತದೆ " ಎಂದಿದ್ದಾರೆ ಆರ್ಥಿಕತಜ್ಞ.
ಜಾನುವಾರು ಸಾಕಾಣೆಯ ಆರ್ಥಿಕತೆಯನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ ಎಂದು ಒತ್ತಿ ಹೇಳಿರುವ ಅವರು, ಉಪಯೋಗಕ್ಕೆ ಬಾರದ ಜಾನುವಾರುಗಳನ್ನು ವಿಲೇವಾರಿ ಮಾಡುವುದರಿಂದ ದೊರಕುವ ಹಣ, ಜನಜೀವನದ ಹಣೆಬರಹ ಮತ್ತು ಭವಿಷ್ಯವನ್ನು ಕಾಪಾಡುತ್ತದೆ.
"ಸಾಮಾಜಿಕ ನೀತಿಗಳು ಇಂತಹ ವರಮಾನವನ್ನು ವಂಚಿಸಿದರೆ, ಇದರಿಂದ ಜಾನುವಾರು ಸಾಕಾಣೆ ಕಡಿಮೆ ಲಾಭವುಳ್ಳ ಕೃಷಿಯಾಗಿ ಮಾರ್ಪಾಡಾಗುತ್ತದೆ" ಎಂದು ಕೂಡ ಅವರು ಹೇಳಿದ್ದಾರೆ.
ಉಪಯೋಗಕ್ಕೆ ಬಾರದ ಜಾನುವಾರುಗಳನ್ನು ವಿಲೇವಾರಿ ಮಾಡುವುದರಿಂದ ದೊರಕುವ ಲಾಭ ಬಿದ್ದುಹೋಗುವುದಕ್ಕೆ ಎರಡು ಕಾರಣಗಳಿರುತ್ತವೆ. ಒಂದು ಜಾನುವಾರು ಮಾಂಸಾದಿಂದ ಒದಗುವ ಹಣ ಕಡಿಮೆಯಾಗುವುದು ಮತ್ತು ಉಪಯೋಗವಿಲ್ಲದ ಜಾನುವಾರುಗಳನ್ನು ಸಾಕಲು ಹಣ ವ್ಯಯಿಸುವುದು.
"ಇಷ್ಟೇ ಅಲ್ಲ, ಸಾಮಾಜಿಕ ನೀತಿಗಳು ಒಟ್ಟಾರೆ ಸಮಾಜದ ವರಮಾನಕ್ಕೂ ಪ್ರತಿಕೂಲವಾಗಬಹುದು. ಬೀದಿಯಲ್ಲಿ ಅಡ್ಡಾಡುವ ಹಸುಗಳು ಹೆಚ್ಚಳವಾಗಬಹುದು. ಅವುಗಳನ್ನು ನೋಡಿಕೊಳ್ಳುವ, ಆರೈಕೆ ಮಾಡಲು ಹೆಚ್ಚು ಹಣ ವ್ಯವ ಮಾಡಬೇಕಾಗುತ್ತದೆ. ಕಾಲುಬಾಯಿ ರೋಗ ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಆರೋಗ್ಯ ತೊಂದರೆಗಳು ಉಲ್ಬಣಿಸಿ, ಸಾಮಾಜಿಕ ವ್ಯಯ ಹೆಚ್ಚಳವಾಗುತ್ತದೆ" ಎಂದು ಕೂಡ ಅವರು ಹೇಳಿದ್ದಾರೆ.
ಜಾನುವಾರು ಹತ್ಯೆ ಮತ್ತು ಮಾರಾಟದ ಮೇಲೆ ಹೆಚ್ಚಿನ ನಿರ್ಬಂಧ ಹೇರಿ ಕೇಂದ್ರ ಪರಿಸರ ಸಚಿವಾಲಯ ಕಳೆದ ತಿಂಗಳು ರೂಪಿಸಿದ್ದ ಹೊಸ ನೀತಿಯ ವಿರುದ್ಧ ವ್ಯಾಪಾ ಟೀಕೆಗಳು ವ್ಯಕ್ತವಾಗಿದ್ದವು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos