ದೇಶ

ಪ್ಯಾರಿಸ್ ಹವಾಮಾನ ಒಪ್ಪಂದ ಕುರಿತ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ ಆಘಾತಕಾರಿ: ರಾಜನಾಥ್ ಸಿಂಗ್

Manjula VN
ನವದೆಹಲಿ: ಪ್ಯಾರಿಸ್ ಹವಾಮಾನ ಒಪ್ಪಂದ ಕುರಿತಂತೆ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷರು ನೀಡಿರುವ ಹೇಳಿಕೆ ನಿಜಕ್ಕೂ ಆಘಾತವನ್ನು ತಂದಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ. 
2 ದಿನಗಳ ರಾಷ್ಟ್ರೀಯ ಮಟ್ಟದ 'ಕ್ಯಾಪಾಸಿಟಿ ಬಿಲ್ಡಿಂಗ್ ಆಫ್ ಸ್ಟೇಟ್ ಡಿಸಾಸ್ಟರ್ ರೆಸ್ಪಾನ್ಸಿವ್ ಫೋರ್ಸ್-2017' ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಪ್ಯಾರಿಸ್ ಹವಾಮಾನ ಒಪ್ಪಂದ ಕುರಿತಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿರುವ ಹೇಳಿಕೆ ಆಘಾತವನ್ನು ತಂದಿದೆ. ಅಮೆರಿಕ ತನ್ನ ನಿರ್ಧಾರ ಹಾಗೂ ಹೇಳಿಕೆ ಕುರಿತಂತೆ ಮರು ಚಿಂತನೆ ನಡೆಸುತ್ತದೆ ಎಂದು ನಾನು ನಂಬಿದ್ದೇನೆಂದು ಹೇಳಿದ್ದಾರೆ. 
ಟ್ರಂಪ್ ಅವರ ಹೇಳಿಕೆ ಕೇವಲ ನಮಗಷ್ಟೇ ಅಲ್ಲ, ಅಂತರಾಷ್ಟ್ರೀಯ ಸಮುದಾಯಕ್ಕೂ ಆಘಾತವನ್ನು ತಂದಿದೆ. ಒಂದು ದೇಶ ಸ್ವಹಿತಾಸಕ್ತಿಯಿಂದ ನಿರ್ಧಾರಗಳನ್ನು ಕೈಗೊಂಡರೆ ಅದು, ಆ ದೇಶಕ್ಕೆ ಅಷ್ಟೇ ಅಲ್ಲದೆ, ವಿಶ್ವ ಸಮುದಾಯದ ಮೇಲೂ ಪರಿಣಾಮ ಬೀರುತ್ತದೆ. ಯಾವ ಸಂದರ್ಭ ಹಾಗೂ ಸನ್ನಿವೇಶಗಳಿಂದ ಅಮೆರಿಕ ಅಧ್ಯಕ್ಷರು ಈ ರೀತಿಯ ಹೇಳಿಕೆ ನೀಡಿದ್ದಾರೆಂಬುದನ್ನು ತಿಳಿಯಬೇಕಿದೆ ಎಂದು ತಿಳಿಸಿದ್ದಾರೆ. 
ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಜೂನ್.1 ರಂದು ಅಮೆರಿಕ ರದ್ದುಗೊಳಿಸಿತ್ತು. ತಮ್ಮ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಟ್ರಂಪ್ ಅವರು, ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಭಾರತ ಒಪ್ಪಿಕೊಂಡಿರುವುದು ದೊಡ್ಡ ಮಟ್ಟದ ಹಣಕಾಸು ನೆರವಿಗಾಗಿ ಎಂದು ಹೇಳಿದ್ದರು. 
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಹಣದಾಸೆಗೋಸ್ಕರ ಭಾರತ ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಟ್ರಂಪ್ ಆರೋಪದಲ್ಲಿ ಸತ್ಯವಿಲ್ಲ. ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ್ದು ಯಾವುದೇ ದೇಶದ ಒತ್ತಡದಿಂದಾಗಲಿ ಅಥವಾ ಹಣದಾಸೆಯಿಂದಾಗಲಿ ಅಲ್ಲ. ಪರಿಸರ ರಕ್ಷಣೆ ಬಗ್ಗೆ ನಮಗಿರುವ ಬದ್ಧತೆಯಿಂದಾಗಿ. 
ಅರಣ್ಯ, ನದಿ, ಬೆಟ್ಟಗಳ ಅರಾಧನೆ ಇಂದಿಗೂ ಭಾರತದಲ್ಲಿ ಮುಂದುವರೆದುಕೊಂಡು ಬಂದಿದೆ. ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ ಕ್ರಮ ಕೂಡ ಭಾರತವು 5,000 ವರ್ಷಗಳಿಂದ ನಂಬಿ, ಆಚರಿಸಿಕೊಂಡು ಬಂದಿರುವ ತತ್ವದ ಕಾರಣಕ್ಕೆ. ಇದು ಭಾರತದ ಸಂಸ್ಕೃತಿ. ಅಮೆರಿಕ ಈ ಒಪ್ಪಂದದ ಜತೆಗೆ ಮುಂದುವರೆಯುತ್ತದೋ, ಬಿಡುತ್ತದೆ. ಆದರೆ, ಭಾರತ ಮಾತ್ರ ಮುಂದುವರೆಯುತ್ತದೆ. ಅಮೆರಿಕ ಅಗೌರವಿಂದ ಕಂಡಿರುವ ಪ್ಯಾರಿಸ್ ಒಪ್ಪಂದವನ್ನು ನಾವು ಕಟಿಬದ್ಧವಾಗಿ ಪಾಲಿಸುತ್ತೇವೆಂದು ಹೇಳಿದ್ದರು. 
SCROLL FOR NEXT