ದೇಶ

ಮಧ್ಯಪ್ರದೇಶ: ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗೋಲಿ ಬಾರ್, ಇಬ್ಬರು ಸಾವು

Lingaraj Badiger
ಇಂದೋರ್: ತಾವು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಮಧ್ಯಪ್ರದೇಶ ಪೊಲೀಸರು ಮಂಗಳವಾರ ಗೋಲಿ ಬಾರ್ ಮಾಡಿದ್ದು, ಘಟನೆಯಲ್ಲಿ ಇಬ್ಬರು ರೈತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂದು ಮಂಡಸೋರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಇದ್ದಕ್ಕಿದ್ದಂತೆ ಹಿಂಸಾರೂಪಕ್ಕೆ ತಿರುಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮತ್ತು ಸಿಆರ್ ಪಿಎಫ್ ಯೋಧರು ಗೋಲಿ ಬಾರ್ ಮಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಗೋಲಿಬಾರ್ ನಿಂದಾಗಿ ಚಿಲೋಡ್ ಪಿಪ್ಲಿಯ ಕನ್ನಯ್ಯಲಾಲ್ ಪಟಿದಾರ್ ಮತ್ತು ಬನ್ಶಿ ಪಟಿದಾರ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರತಿಭಟನೆ ವೇಳೆ ಆಕ್ರೋಶಗೊಂಡ ರೈತರು ಸುಮಾರು 10ಕ್ಕು ಹೆಚ್ಚು ಲಾರಿಗಳಿಗೆ ಹಾಗೂ ಮೂರು ದ್ವಿಚಕ್ರ ವಾಹನ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಮಂಡಸೋರ್ ನ ಪಿಪ್ಲಿಮಂಡಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಉಜ್ಜೈನ್ ಉಪ ವಿಭಾಗೀಯ ಆಯುಕ್ತ ಎಂ.ಬಿ.ಒಜಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
SCROLL FOR NEXT