ದೇಶ

ಡಿಜಿಟಲ್ ಇಂಡಿಯಾ: ಮೊಬೈಲ್ ನೆಟ್ವರ್ಕ್ ಗಾಗಿ ಮರ ಹತ್ತಿದ ಕೇಂದ್ರ ಸಚಿವ!

Srinivas Rao BV
ರಾಜಸ್ಥಾನ: ಸರ್ಕಾರಗಳು ಆಕರ್ಷಕ ಟ್ಯಾಗ್ ಲೈನ್ ಗಳ ಅಡಿಯಲ್ಲಿ ಯೋಜನೆಗಳನ್ನು ಜಾರಿಗೊಳಿಸುತ್ತವೆ. ರಾಜಕಾರಣಿಗಳು ಸ್ವತಃ ಅದರ ಅನುಭವ ಪಡೆದಾಗಲೇ ಸರ್ಕಾರದ ಯೋಜನೆ ಎಷ್ಟರ ಮಟ್ಟಿಗೆ ಜನರಿಗೆ ತಲುಪಿದೆ ಎಂಬುದು ತಿಳಿಯುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆಯಾಗಬಲ್ಲ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಮೊಬೈಲ್ ನೆಟ್ವರ್ಕ್ ಸಿಗದೇ ಪರದಾಡಿದ ಕೇಂದ್ರ ಸಚಿವರು ಮರ ಹತ್ತಿದ ಘಟನೆ ನಡೆದಿದೆ. 
ಹಣಕಾಸು ಇಲಾಖೆಯ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜಸ್ಥಾನದಲ್ಲಿರುವ ತಮ್ಮ ಕ್ಷೇತ್ರ ಬಿಕಾನೆರ್ ಧೋಲಿಯಾದ ಗ್ರಾಮಕ್ಕೆ ತೆರಳಿದ್ದ ವೇಳೆಯಲ್ಲಿ ಮೊಬೈಲ್ ನೆಟ್ವರ್ಕ್ ಸಿಗದೇ ಪರದಾಡಿದ್ದಾರೆ. ಅಷ್ಟೇ ಅಲ್ಲದೇ ಮೊಬೈಲ್ ಸಿಗ್ನಲ್ ಗಾಗಿ ಮರ ಹತ್ತಿ ಸರ್ಕಸ್ ಸಹ ಮಾಡಿದ್ದಾರೆ. 
ತಮ್ಮ ಕ್ಷೇತ್ರದ ಗ್ರಾಮವೊಂದರಲ್ಲಿ ಆಸ್ಪತ್ರೆಯಲ್ಲಿ ಸೌಲಭ್ಯಗಳ, ಸಿಬ್ಬಂದಿಗಳ ಕೊರತೆ ಇರುವುದರ ಬಗ್ಗೆ ನಿರಂತರ ದೂರು ಬಂದಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಪರಿಶೀಲನೆಗೆಂದು ತೆರಳಿದ್ದರು. ಆದರೆ ಮೊಬೈಲ್ ನಲ್ಲಿ ಸಿಗ್ನಲ್ ಸರಿಯಾಗಿ ಸಿಗದೇ ಇದ್ದ ಕಾರಣ ಅಧಿಕಾರಿಗಳನ್ನೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಈ ಹಂತದಲ್ಲಿ ಮರ ಏರಿದರೆ ಮೊಬೈಲ್ ಸಿಗ್ನಲ್ ಸಿಗುತ್ತದೆ ಎಂದು ಗ್ರಾಮಸ್ಥರು ಸಚಿವರಿಗೆ ಸಲಹೆ ನೀಡಿದ್ದಾರೆ. ಅಂತೆಯೇ ಏಣಿಯ ಸಹಾಯದಿಂದ ಸಚಿವರು  ಸಿಗ್ನಲ್ ಗಾಗಿ ಮರ ಹತ್ತಿದ್ದರು.
SCROLL FOR NEXT