ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್
ನವದೆಹಲಿ: ರೈತರು ಸಮಾಜ-ವಿರೋಧಿಗಳೆಂದು ಹೇಳುವುದಾದರೆ, ಹಿಂಸಾಚಾರದಲ್ಲಿ ಮೃತಪಟ್ಟ ರೈತರಿಗೇಕೆ ಪರಿಹಾರ ಹಣವನ್ನು ಘೋಷಣೆ ಮಾಡಿದಿರಿ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಗುರುವಾರ ಪ್ರಶ್ನೆ ಹಾಕಿದ್ದಾರೆ.
ಮಧ್ಯಪ್ರದೇಶದ ಮಂಡಸೌರ್ ಹಿಂಸಾಚಾರ ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಘರ್ಷಣೆ ವೇಳೆ ಮೃತಪಟ್ಟವರನ್ನು ಸಮಾಜ ವಿರೋಧಿಗಳೆಂದು ಹೇಳಲಾಗುತ್ತಿದೆ. ರೈತರು ಸಮಾಜ ವಿರೋಧಿಗಳೆಂದು ಕರೆಯುವುದಾದರೆ ಅವರಿಗೇಕೆ ಪರಿಹಾರ ಧನವನ್ನು ಘೋಷಣೆ ಮಾಡಿದಿರಿ ಎಂದು ಪ್ರಶ್ನಿಸಿದ್ದಾರೆ.
ಶಿವರಾಜ್ ಜೀ ನಿಮಗೆ ನಾಚಿಕೆ ಎಂಬುದು ಇರುವುದಾದರೆ ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜಿನಾಮೆ ಸಲ್ಲಿಸಿ. ರೈತರ ಮಗ ಎಂದು ನೀವು ಹೇಳಿಕೊಳ್ಳುತ್ತೀರಿ, ಆದರೆ, ಮತ್ತೊಂದೆಡೆ ರೈತರ ಮೇಲೆಯೇ ಗುಂಡು ಹಾರಿಸುತ್ತಿದ್ದೀರಿ. ನೀವು ನಿಜಕ್ಕೂ ಅತ್ಯಂತ ಕೆಟ್ಟ ಮಗ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಬೆಳೆಗಳಿಗೆ ಸೂಕ್ತ ಬೆಲೆ, ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಧ್ಯಪ್ರದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಘರ್ಷಣೆ ಏರ್ಪಟ್ಟ ಕಾರಣ ಪೊಲೀಸರು ಗೋಲಿಬಾರ್ ನಡೆಸಿದ್ದರು ಎಂದು ಹೇಳಲಾಗುತ್ತಿತ್ತು. ಇದಾದ ಬಳಿಕ ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಐವರು ರೈತರು ಮೃತಪಟ್ಟಿದ್ದರು. ಅಲ್ಲದೆ, ಹಲವರಿಗೆ ಗಾಯಗಳಾಗಿತ್ತು. ಪ್ರಕರಣ ಸಂಬಂಧ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೃತ ರೈತರ ಕುಟುಂಬಗಳಿಗೆ ತಲಾ ರು.1 ಕೋಟಿ ಪರಿಹಾರ ಘೋಷಣೆ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics