ನವದೆಹಲಿ: ಜಲಿಯನ್ ವಾಲಾ ಭಾಗ್ ದುರಂತಕ್ಕೆ ಕಾರಣವಾದ ಕುಖ್ಯಾತ ಜನರಲ್ ಡೈಯರ್ ಜೊತೆಗೆ ಹೋಲಿಸಿರುವುದಕ್ಕೆ ತಮಗೆ ನೋವಾಗಿಲ್ಲ ಎಂದು ಭಾರತೀಯ ಸೇನಾಧ್ಯಕ್ಷ ಬಿಪಿನ್ ರಾವತ್ ಹೇಳಿದ್ದಾರೆ.
"ನೋಡಿ ನಾನು ಸೇನಾಧಿಕಾರಿ. ಯಾವುದೋ ಒಂದು ವಿಷಯ ನನಗೆ ತೊಂದರೆ ನೀಡುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧನಿರಬೇಕು... ಜನ ನನ್ನ ಪ್ರತಿಕ್ರಿಯೆಗಳನ್ನು ತಪ್ಪಾಗಿ ಅರ್ಥೈಸಬಹುದು" ಎಂದು ಜನರಲ್ ರಾವತ್ ತಿಳಿಸಿದ್ದಾರೆ.
ಪಾರ್ಥ ಚಟರ್ಜಿಯವರು ತಮ್ಮ ಲೇಖನವೊಂದರಲ್ಲಿ, ರಾವತ್ ಅವರನ್ನು ಡೈಯರ್ ಅವರಿಗೆ ಹೋಲಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಏಪ್ರಿಲ್ ೧೩, ೧೯೧೯ ರಲ್ಲಿ ನಡೆದ ಜಲಿಯನ್ ವಾಲ ಭಾಗ್ ದುರಂತದಲ್ಲಿ ೩೭೯ ಜನ ಪ್ರತಿಭಟನಾಕಾರರನ್ನು ಹತ್ಯೆಗಯ್ಯಲಾಗಿತ್ತು.
"ಇದಕ್ಕೆ ಪ್ರತಿಕ್ರಿಯಿಸುವ ಆವಶ್ಯಕತೆಯಿಲ್ಲ. ಅವರು (ಚಟರ್ಜಿ) ಬೇರೆಲ್ಲಿಂದಲೋ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಬಹುದು. ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ" ಎಂದು ಜನರಲ್ ಹೇಳಿದ್ದಾರೆ.
ಈ ಹೋಲಿಕೆಯಿಂದ ನಿಮಗೆ ನೋವಾಗಿಲ್ಲವೇ ಎಂಬ ಪ್ರಶ್ನೆಗೆ "ಬಿಲ್ಕುಲ್ ಇಲ್ಲ" ಎಂದಿದ್ದಾರೆ.
ಜನರೇ ಇದರ ಬಗ್ಗೆ ಅವಲೋಕಿಸಲು ಬಿಡಬೇಕು ಎಂದಿರುವ ಜನರಲ್ "ಜನರು ಅತ್ಯುತ್ತಮ ನ್ಯಾಯಾಧೀಶರು. ಬಹುಸಂಖ್ಯಾತರ ನಿರ್ಧಾರ ಸರಿಯಾಗಿರುತ್ತದೆ" ಎಂದು ಅವರು ಹೇಳಿದ್ದಾರೆ.
ಕಾಶ್ಮೀರದಲ್ಲಿ ಸೇನಾ ಅಧಿಕಾರಿಯೊಬ್ಬರು ವ್ಯಕ್ತಿಯೊಬ್ಬನನ್ನು ಕವಚವಾಗಿ ವಾಹನಕ್ಕೆ ಕಟ್ಟಿಕೊಂಡಿದ್ದ ನಡೆಯನ್ನು ಜನರಲ್ ರಾವತ್ ಸಮರ್ಥಿಸಿಕೊಂಡಿದ್ದರು. ಇದನ್ನು ಪಾರ್ಥ ಚಟರ್ಜಿ ಖಂಡಿಸಿ ಅವರನ್ನು ಜನರಲ್ ಡೈಯರ್ ಗೆ ಹೋಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics