ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆ(ಎಲ್ ಒಸಿ)ಯ ಬಳಿ ಅಕ್ರಮವಾಗಿ ಗಡಿ ನುಸುಳಲು ಯತ್ನಿಸುತ್ತಿದ್ದ ಐವರು ಉಗ್ರರನ್ನು ಭಾರತೀಯ ಸೇನೆ ಶುಕ್ರವಾರ ಹೊಡೆದುರುಳಿಸಿದೆ.
ಪಾಕಿಸ್ತಾನ ಸೇನೆಯ ಬೆಂಬಲದೊಂದಿಗೆ ಉಗ್ರರು ಭಾರತದೊಳಗೆ ನುಸುಳಲು ಹೊಂಚು ಹಾಕುತ್ತಿರುವುದನ್ನು ಪತ್ತೆ ಹಚ್ಚಿದ ಭಾರತೀಯ ಯೋಧರು, ತಕ್ಷಣ ಗುಂಡಿನ ದಾಳಿ ನಡೆಸಿ ಐವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಉಗ್ರರು ಸಹ ಪ್ರತಿ ದಾಳಿ ನಡೆಸಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 15 ದಿನಗಳಿಂದ ಭಾರತೀಯ ಸೇನೆ ಉಗ್ರರ ಒಳನುಸುಳುವಿಕೆಯ ಏಳು ಯತ್ನಗಳನ್ನು ವಿಫಲಗೊಳಿಸಿದ್ದು, ಒಟ್ಟು 12 ಉಗ್ರರನ್ನು ಹತ್ಯೆ ಮಾಡಿದೆ.