ಲಂಡನ್: ಬ್ರಿಟನ್ ನ ಸಂಸತ್ ಚುನಾವಣೆಯಲ್ಲಿ ಈ ಬಾರಿ ಭಾರತೀಯ ಮೂಲದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ಸಾಧ್ಯತೆ ಇದೆ. ಬ್ರಿಟನ್ ಸಂಸತ್ ಗೆ ಭಾರತೀಯ ಮೂಲದ ಸಿಖ್ ಅಭ್ಯರ್ಥಿ ಆಯ್ಕೆಯಾಗಿದ್ದು, ಸಿಖ್ ಪೇಟ ಧರಿಸಿ ಬ್ರಿಟನ್ ಸಂಸತ್ ಪ್ರವೇಶಿಸಲಿರುವ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ತನ್ಮಾನ್ಜೀತ್ ಸಿಂಗ್ ದೇಶಿ ಪಾತ್ರರಾಗಿದ್ದಾರೆ.
ಲೇಬರ್ ಪಕ್ಷವನ್ನು ಪ್ರತಿನಿಧಿಸುತ್ತಿರುವ ಭಾರತೀಯ ಮೂಲದ ಅಭ್ಯರ್ಥಿಗಳು ಕನ್ಸರ್ವೇಟೀವ್ಸ್ ಪಕ್ಷದ ಅಭ್ಯರ್ಥಿಗಳಿಗಿಂತ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಹಿಂದೆಂದಿಗಿಂತಲೂ ಹೆಚ್ಚು ಭಾರತೀಯರು ಬ್ರಿಟನ್ ಸಂಸತ್ ಗೆ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಎಡ್ಜ್ಬಾಸ್ಟನ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ತನ್ಮಾನ್ಜೀತ್ ಸಿಂಗ್ ದೇಶಿ ಕನ್ಸರ್ವೇಟೀವ್ ಪಕ್ಷದ ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿಯನ್ನು 16,998 ಮತಗಳಿಂದ ಮಣಿಸಿ ಸಂಸತ್ ಪ್ರವೇಶಿಸಿದ್ದಾರೆ. ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ತನ್ಮಾನ್ಜೀತ್ ಸಿಂಗ್, ನಾನು ಹುಟ್ಟಿ ಬೆಳೆದ ಎಡ್ಜ್ಬಾಸ್ಟನ್ ಕ್ಷೇತ್ರದಿಂದ ಸಂಸತ್ ಗೆ ಆಯ್ಕೆಯಾಗುವ ಅವಕಾಶ ನೀಡಿರುವುದಕ್ಕೆ ಅತ್ಯಂತ ಸಂತಸಗೊಂಡಿದ್ದೇವೆ. ಇಲ್ಲಿನ ಜನತೆಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತೇನೆ, ಒಗ್ಗಟ್ಟು ಕಠಿಣ ಪರಿಶ್ರಮಗಳಿಂದ ಅದ್ಭುತಗಳನ್ನು ಸಾಧಿಸಬಹುದಾಗಿದೆ ಎಂದು ಹೇಳಿದ್ದಾರೆ.
ಇನ್ನು ಬ್ರಿಟನ್ ಚುನಾವಣೆಯಲ್ಲಿ ಸಿಖ್ ಮಹಿಳೆಯೊಬ್ಬರು ಗೆಲುವು ಸಾಧಿಸಿದ್ದು, ಪ್ರೀತ್ ಕೌರ್ ಗಿಲ್ ಬರ್ಮಿಂಗ್ಹ್ಯಾಮ್ ಎಡ್ಜ್ಬಾಸ್ಟನ್ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಬ್ರಿಟನ್ ಸಂಸತ್ ಪ್ರವೇಶಿಸಲಿರುವ ಮೊದಲ ಸಿಖ್ ಮಹಿಳೆಯಾಗಲಿದ್ದಾರೆ. ಕನ್ಸರ್ವೇಟೀವ್ಸ್ ಪಕ್ಷದ ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿ ಕ್ಯಾರೋಲಿನ್ ಸ್ಕ್ವೈರ್ ಅವರನ್ನು 6,917 ಮತಗಳಿಂದ ಮಣಿಸಿ ಸಂಸತ್ ಗೆ ಆಯ್ಕೆಯಾಗಿದ್ದಾರೆ.