ದೇಶ

ಶ್ರೀನಗರ ಬಂದ್'ಗೆ ಹುರಿಯತ್ ನಾಯಕರ ಕರೆ: 7 ಪ್ರದೇಶಗಳಲ್ಲಿ ನಿರ್ಬಂಧ ಜಾರಿ

Manjula VN
ಶ್ರೀನಗರ: ಶ್ರೀನಗರ ಬಂದ್ ಗೆ ಹುರಿಯತ್ ನಾಯಕರು ಕರೆ ನೀಡಿರುವ ಹಿನ್ನೆಲೆಯಲ್ಲಿ 7 ಪ್ರದೇಶಗಳಲ್ಲಿ ನಿರ್ಬಂಧ ಹೇರಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶುಕ್ರವಾರ ನಿರ್ಧಾರ ಕೈಗೊಂಡಿದೆ. 
ಈ ಕುರಿತಂತೆ ಶ್ರೀನಗರ ಉಪ ಆಯುಕ್ತರು ಪ್ರತಿಕ್ರಿಯೆ ನೀಡಿದ್ದು, ಶುಕ್ರವಾರ ಹಿನ್ನಲೆಯಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು, ಶ್ರೀನಗರ ಬಂದ್ ಗೆ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದಾರೆ. ಹೀಗಾಗಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆವಹಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕನ್ಯಾರ್, ಮಹರಾಜ್ ಗುಂಡ್, ಸಫಾ ಕಡಲ್, ರೈನ್ವಾರಿ, ಕ್ರಾಲ್ ಖುದ್, ನೌಹಟ್ಟಾ ಮೈಸುಮಾ ಪ್ರದೇಶಗಳಲ್ಲಿ ನಿರ್ಬಂಧ ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ. 
ಶೋಪಿಯಾನ್ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಯುವಕನೊಬ್ಬ ಸಾವನ್ನಪ್ಪಿದ್ದ. ಯುವಕನ ಸಾವಿನ ಹಿಂದೆ  ಸರ್ಕಾರದ ಕೈವಾಡವಿದೆ ಎಂದು ಹೇಳಿರುವ ಪ್ರತ್ಯೇಕತಾವಾದಿಗಳು ಕಾಶ್ಮೀರದಲ್ಲಿ ಇಂದು ಶಾಂತಿಯುತ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ. ಅಲ್ಲದೆ, ಮೃತಪಟ್ಟ ಯುವಕನ ಮನೆಗೆ ಕಾಲ್ನಡಿಗೆ ಮೂಲಕ ಭೇಟಿ ನೀಡಲು ನಿರ್ಧರಿಸಿದ್ದಾರೆ. 
ಇದಲ್ಲದೆ, ಎರಡು ಪ್ರತ್ಯೇಕ ಹುರಿಯತ್ ಕಾನ್ಫರೆನ್ಸ್ ಗಳು ಭಾರತೀಯ ವಿದ್ಯುನ್ಮಾನ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದು, ಭಾರತೀಯ ಮಾಧ್ಯಮಗಳು ಕಾಶ್ಮೀರಿಗರ ವಿರುದ್ಧ ಪೂರ್ವಾಗ್ರಹ ಪೀಡಿತ ಹಾಗೂ ಪಕ್ಷಪಾತ ಸುದ್ದಿಗಳನ್ನು ನೀಡುತ್ತಿವೆ ಎಂದು ಆರೋಪಿಸಿವೆ. 
SCROLL FOR NEXT