ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
ಭೋಪಾಲ್: ರೈತರ ಉಗ್ರ ಹೋರಾಟಕ್ಕೆ ತತ್ತರಿಸಿ ಹೋಗಿದ್ದ ಮಂಡಸೌರ್'ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಬುಧವಾರ ಭೇಟಿ ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬೆಳೆಗಳಿಗೆ ಸೂಕ್ತ ಬೆಲೆ, ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಧ್ಯಪ್ರದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಘರ್ಷಣೆ ಏರ್ಪಟ್ಟ ಕಾರಣ ಪೊಲೀಸರು ಗೋಲಿಬಾರ್ ನಡೆಸಿದ್ದರು. ಇದಾದ ಬಳಿಕ ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಐವರು ರೈತರು ಮೃತಪಟ್ಟಿದ್ದರು. ರಾಜ್ಯ ಸರ್ಕಾರದ ಈ ಕ್ರಮವನ್ನು ವಿರೋಧಿಸಿ ತೀವ್ರವಾಗಿ ಪ್ರತಿಭಟನೆ ನಡೆಸಿದ್ದ ರೈತರು ಬಸ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮೂಲಕ ಮಂಡಸೌರ್ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿತ್ತು.
ಪ್ರತಿಭಟನೆ ಹಾಗೂ ಹಿಂಸಾಚಾರಗಳಿಂದ ತತ್ತರಿಸಿ ಹೋಗಿದ್ದ ಮಂಡಸೌರ್ ನಲ್ಲಿ ಇದೀಗ ಶಾಂತಿಯುತ ವಾತಾವರಣ ಮರುಸ್ಥಾಪನೆಗೊಂಡಿದ್ದು, ಗೋಲಿಬಾರ್ ನಲ್ಲಿ ಸಾವನ್ನಪ್ಪಿದ ರೈತರ ಕುಟುಂಬಸ್ಥರನ್ನು ಭೇಟಿಯಾಗಲು ಮುಖ್ಯಮಂತ್ರಿ ಚೌಹಾಣ್ ಅವರು ಮಂಡಸೌರ್'ಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಲವು ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಮಂಡಸೌರ್ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಹಲವು ಸಾಮಾಜಿಕ ಕಾರ್ಯಕರ್ತರು ಹಿಂಸಾಚಾರ ಪೀಡಿದ ಪ್ರದೇಶಕ್ಕೆ ಭೇಟಿ ನೀಡಲು ಯತ್ನ ನಡೆಸಿದ್ದರು. ಆದರೆ, ಪೊಲೀಸರು ಇವುಗಳಿಗೆ ಯಾವುದೇ ರೀತಿಯ ಆಸ್ಪದವನ್ನು ನೀಡಿರಲಿಲ್ಲ. ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ಪರಿಸ್ಥಿತಿ ತಿಳಿಗೊಂಡ ಬಳಿಕ ನಿಷೇಧಾಜ್ಞೆಯನ್ನು ತೆರವುಗೊಳಿಸಿದ್ದರು.