ಮುಂಬೈ: ಗೇಟ್ ವೇ ಆಫ್ ಇಂಡಿಯಾ ಹೆಸರು ಗುಲಾಮಗಿರಿಯ ಸಂಕೇತ ಎಂದು ಬಿಜೆಪಿ ಶಾಸಕ ರಾಜ್ ಪುರೋಹಿತ್ ಅಭಿಪ್ರಾಯಪಟ್ಟಿದ್ದು, ಗೇಟ್ ವೇ ಆಫ್ ಇಂಡಿಯಾಗೆ ಭಾರತ್ ದ್ವಾರ್ ಎಂದು ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಗೇಟ್ ವೇ ಆಫ್ ಇಂಡಿಯಾ ಸ್ಮಾರಕ ಬ್ರಿಟೀಷ್ ಆಡಳಿತದ ಅವಧಿಯ ಗುಲಾಮಗಿರಿಯ ಸಂಕೇತವಾಗಿದೆ. ಅದನ್ನು ಭಾರತ್ ದ್ವಾರ್ ಎಂದು ಪುನಃ ನಾಮಕರಣ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟದ ಹುತಾತ್ಮರಿಗೆ ಗೌರವ ಸಲ್ಲಿಸಬೇಕೆಂದು ರಾಜ್ ಪುರೋಹಿತ್ ಅಭಿಪ್ರಾಯಪಟ್ಟಿದ್ದಾರೆ.
ಈ ವಿಷಯವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಚರ್ಚಿಸಿದ್ದು, ಅವರು ಬೇಡಿಕೆಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ. ನಾವು ಬಾಂಬೆಯನ್ನು ಮುಂಬೈ ಎಂದು ಮರುನಾಮಕರಣ ಮಾಡಿದ್ದೇವೆ. ಮಲ್ಬಾರ್ ಹಿಲ್ ನ್ನು ವಾಲ್ಕೇಶ್ವರ್ ಹಾಗೂ ವಿಕ್ಟೋರಿಯಾ ಟರ್ಮಿನಸ್ ನ್ನು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಎಂದು ಮರುನಾಮಕರಣ ಮಾಡಿದ್ದೇವೆ ಹಾಗಾದರೆ ಗೇಟ್ ವೇ ಆಫ್ ಇಂಡಿಯಾವನ್ನು ಭಾರತ್ ದ್ವಾರ್ ಎಂದು ಏಕೆ ಮರುನಾಮಕರಣ ಮಾಡಬಾರದು ಎಂದು ಬಿಜೆಪಿ ಶಾಸಕ ರಾಜ್ ಪುರೋಹಿತ್ ಪ್ರಶ್ನಿಸಿದ್ದಾರೆ.
1911 ರಲ್ಲಿ ಕಿಂಗ್ ಜಾರ್ಜ್ V ಹಾಗೂ ಕ್ವೀನ್ ಮೇರಿ ಮುಂಬೈ ಗೆ ಆಗಮಿಸಿದ್ದರ ಸ್ಮರಣಾರ್ಥ ಗೇಟ್ ವೇ ಆಫ್ ಇಂಡಿಯಾವನ್ನು 1924 ರಲ್ಲಿ ನಿರ್ಮಿಸಲಾಗಿತ್ತು.