ವಿಶಾಖಪಟ್ಟಣಂ: ಆಂಧ್ರಪ್ರದೇಶ ಆಡಳಿತರೂಢ ತೆಲುಗು ದೇಶಂ ಪಕ್ಷದ ಸಂಸದ ಜೆಸಿ ದಿವಾಕರ್ ರೆಡ್ಡಿ ಅವರು ವಿಶಾಖಪಟ್ಟಣಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಡವಾಗಿ ಆಗಮಿಸಿದ್ದರಿಂದ ವಿಮಾನ ಪ್ರಯಾಣಕ್ಕೆ ಅವಕಾಶ ನೀಡದ ಸಿಬ್ಬಂದಿಗಳೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ.
ಇಂದು ದಿವಾಕರ್ ರೆಡ್ಡಿ ಅವರು ಇಂಡಿಗೋ ವಿಮಾನದಲ್ಲಿ ಹೈದರಬಾದ್ ಗೆ ಪ್ರಯಾಣಿಸಬೇಕಿತ್ತು. ಆದರೆ ವಿಮಾನ ನಿಲ್ದಾಣಕ್ಕೆ ತಡವಾಗಿ ಆಗಮಿಸಿದ್ದರಿಂದ ಬೋರ್ಡಿಂಗ್ ಪಾಸ್ ಕೌಂಟರ್ ಗಳನ್ನು ಬಂದ್ ಮಾಡಲಾಗಿತ್ತು. ಇದರಿಂದ ಆಕ್ರೋಶಗೊಂಡ ಸಂಸದರು ವಿಮಾನ ಸಿಬ್ಬಂದಿಯನ್ನು ತರಾಟೆಗೆದುಕೊಂಡು, ಬೋರ್ಡಿಂಗ್ ಪಾಸ್ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಇದಕ್ಕೆ ವಿಮಾನ ಸಿಬ್ಬಂದಿ ಒಪ್ಪದ ಹಿನ್ನೆಲೆಯಲ್ಲಿ ಇಬ್ಬರ ಮಧ್ಯ ಕೆಲಕಾಲ ಮಾತಿನ ಚಕಮಕಿ ನಡೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣದ ನಿರ್ದೇಶ ಜಿ ಪ್ರಕಾಶ್ ರೆಡ್ಡಿ ಅವರು, ತಡವಾಗಿ ಬಂದ ಪ್ರಯಾಣಿಕರು ಪಾಸ್ ನೀಡುವ ವಿಚಾರ ವಿಮಾನಯಾನ ಸಂಸ್ಥೆಗೆ ಸಂಬಂಧಿಸಿದ ವಿಚಾರ. ಇದರಲ್ಲಿ ನಾವು ಏನು ಮಾಡುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.
ಗಲಾಟೆಯಿಂದ ವಿಮಾನ ನಿಲ್ದಾಣದ ಆಸ್ತಿ-ಪಾಸ್ತಿ ಹಾನಿಯಾಗಿರುವುದನ್ನು ಪ್ರಕಾಶ್ ರೆಡ್ಡಿ ಅವರು ನಿರಾಕರಿಸಿದ್ದಾರೆ.
ವಿಮಾನ ತಪ್ಪಿಸಿಕೊಂಡ ಟಿಡಿಪಿ ಸಂಸದ ಇಂಡಿಗೋ ವಿಮಾನಕ್ಕೆ ಇಡೀ ಶಾಪ ಹಾಕಿದ್ದಾರೆ.