ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಜುನೈದ್ ಮಟ್ಟೂ ಅಂತ್ಯ ಸಂಸ್ಕಾರಕ್ಕೆ ಭಾರೀ ಸಂಖ್ಯೆಯ ಶಸ್ತ್ರಧಾರಿ ಉಗ್ರವಾದಿಗಳು ಶನಿವಾರ ಜಮಾಯಿಸಿದ್ದರು.
ಸೇನಾ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದ ಮಟ್ಟೂ ಅಂತ್ಯ ಸಂಸ್ಕಾರಕ್ಕೆ ಆಗಮಿಸಿದ್ದ ಉಗ್ರರು ತಮ್ಮ ಬಂದೂಕುಗಳ ಮೂಲಕ ಗೌರವಾರ್ಪಣೆ ಸಲ್ಲಿಸಿದ್ದಾರೆ.
ಅನಂತ ನಾಗ್ ಜಿಲ್ಲೆಯ ಅರ್ವನಿ ಗ್ರಾಮದಲ್ಲಿ ಶುಕ್ರವಾರವಷ್ಟೇ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜುನದ್ ಮತ್ತು ಆತನ ಇಬ್ಬರು ಸಹಚರರು ಸಾವಿಗೀಡಾಗಿದ್ದರು. ಕುಲ್ಗಾಮ್ ನ ಖುದ್ವಾನಿ ಗ್ರಾಮದಲ್ಲಿ ಜುನೈದ್ ಅಂತ್ಯ ಸಂಸ್ಕಾರ ನಡೆಯಿತು. ಜುನೈದ್ ಪಾರ್ಥಿವ ಶರೀರ ದಫನಕ್ಕೂ ಮೊದಲು ನಾಲ್ಕು ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದ ಪ್ರಾರ್ಥನೆಗಳನ್ನು ಸಲ್ಲಿಸಲಾಗಿತ್ತು.
ನೆರೆ ಗ್ರಾಮಗಳು ಸೇರಿದಂತೆ ದಕ್ಷಿಣ ಕಾಶ್ಮೀರದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಜನರು ಅಂತ್ಯ ಸಂಸ್ಕಾರದಲ್ಲಿ ನೆರೆದಿದ್ದರು.