ದೇಶ

ರಾಮನಾಥ್ ಕೋವಿಂದ್ ಅಸಾಧಾರಣ ರಾಷ್ಟ್ರಪತಿಯಾಗುತ್ತಾರೆ: ಪ್ರಧಾನಿ ಮೋದಿ

Lingaraj Badiger
ನವದೆಹಲಿ: ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಬಿಹಾರ ರಾಜ್ಯಪಾಲ, ದಲಿತ ನಾಯಕ ರಾಮನಾಥ್ ಕೋವಿಂದ್ ಅವರು ಒಬ್ಬ ಅಸಾಧಾರಣ ರಾಷ್ಟ್ರಪತಿಯಾಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಬಿಜೆಪಿ ಆಯ್ಕೆ ಮಾಡಿರುವ ರಾಷ್ಟ್ರಪತಿ ಅಭ್ಯರ್ಥಿ ಶ್ರೀ ರಾಮನಾಥ್ ಕೋವಿಂದ್ ಅವರು ಒಬ್ಬ ಅಸಾಧಾರಣ ರಾಷ್ಟ್ರಪತಿಯಾಗುತ್ತಾರೆ ಮತ್ತು ಬಡವರ ಧ್ವನಿಯಾಗಿ, ವಿವೇಚನೆಯುಳ್ಳ ರಾಷ್ಟ್ರಪತಿಯಾಗಿ ಮುಂದುವರೆಯಲಿದ್ದಾರೆ ಎಂದ ಪ್ರಧಾನಿ ತಿಳಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದ ಕೋವಿಂದ್ ಅವರಿಗೆ ದೂರವಾಣಿ ಕರೆ ಮಾಡಿ ಶುಭ ಕೋರಿದ್ದಾರೆ.
ಇನ್ನು ಟಿಡಿಪಿ ಮತ್ತು ಟಿಆರ್ ಎಸ್ ಸಹ ರಾಮನಾಥ್ ಕೋವಿಂದ್ ಅವರಿಗೆ ಬೆಂಬಲ ಘೋಷಿಸಿದ್ದು, ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಅಲ್ಲದೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸಹ ಬಿಜೆಪಿ ಅಭ್ಯರ್ಥಿಗೆ ನಮ್ಮ ಬೆಂಬಲವಿದೆ ಎಂದಿದ್ದಾರೆ.
ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್, ಬಿಜೆಪಿ ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ. ನಮ್ಮನ್ನು ಭೇಟಿ ಮಾಡಿದಾಗ ರಾಷ್ಟ್ರಪತಿ ಅಭ್ಯರ್ಥಿ ಹೆಸರು ಘೋಷಿಸುವ ಮುನ್ನ ನಮ್ಮ ಗಮನಕ್ಕೆ ತರುವುದಾಗಿ ಹೇಳಿದ್ದರು. ಆದರೆ ನಿರ್ಧಾರ ನಿರ್ಧಾರ ತೆಗೆದುಕೊಂಡ ನಂತರ ನಮಗೆ ಮಾಹಿತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಹೇಳಿದ್ದಾರೆ.
ಇನ್ನು ಸಿಪಿಐ ಸಹ ಬಿಜೆಪಿ ಅಭ್ಯರ್ಥಿಗೆ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಹಾಗೂ ವೆಂಕಯ್ಯ ನಾಯ್ಡು ಅವರು ನಮ್ಮನ್ನು ಭೇಟಿ ಮಾಡಿದಾಗ ಯಾವುದೇ ಹೆಸರು ಪ್ರಸ್ತಾಪಿಸಲಿಲ್ಲ. ಆದರೆ ಈಗ ಆರ್ ಎಸ್ಎಸ್ ಹಿನ್ನೆಲೆಯಿರುವ ವ್ಯಕ್ತಿಯನ್ನು ಆಯ್ಕೆ ಮಾಡಿದ್ದು ಇದಕ್ಕೆ ನಮ್ಮ ವಿರೋಧವಿದೆ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಅವರು ಹೇಳಿದ್ದಾರೆ.
SCROLL FOR NEXT