ಮುಂಬೈ: ಪಾಕಿಸ್ತಾನದ ವಿರುದ್ಧ ಆಟ ಆಡಲು ವಿರೋಧ ವ್ಯಕ್ತಪಡಿಸಿದ್ದೇ ಆಗಿದ್ದರೆ ದೇಶದ ಜನತೆ ಭಾರತ ಕ್ರಿಕೆಟ್ ತಂಡವನ್ನು ಮತ್ತಷ್ಟು ಗೌರವಿಸುತ್ತಿತ್ತು ಎಂದು ಶಿವಸೇನೆ ಸೋಮವಾರ ಹೇಳಿದೆ.
ಈ ಹಿಂದಷ್ಟೇ ಭಾರತದ ತಂಡ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಕಾಶ್ಮೀರ ಪ್ರತ್ಯೇಕತಾವಾಗಿ ಮಿರ್'ವಾಯಿಜ್ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದರು,
ಪಾಕಿಸ್ತಾನಕ್ಕೆ ಅಭಿನಂದನೆ ಸಲ್ಲಿಸುತ್ತಿರುವ ಮಿರ್'ವಾಯಿಜ್ ಅವರು ಗಂಟು ಮೂಟೆ ಕಟ್ಟಿಕೊಂಡು ಗಡಿ ದಾಟಿ ಪಾಕಿಸ್ತಾನಕ್ಕೇ ಹೋಗಲಿ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ನಾಯಕ, ಸಂಜನ್ ರಾವತ್ ಅವರು, ಯಾವುದೇ ವೇದಿಕೆಯೇ ಆಗಲೀ ಪಾಕಿಸ್ತಾನದ ಜೊತೆಗೆ ಶೂನ್ಯ ಸಂಬಂಧ ಹೊಂದಲು ಇಡೀ ದೇಶ ಬಯಸುತ್ತದೆ. ಯಾರೊಬ್ಬರ ದೇಶ ಪ್ರೇಮದ ಕುರಿತಂತೆಯೂ ನಾನು ಪ್ರಶ್ನೆ ಹಾಕುವುದಿಲ್ಲ. ಆದರೆ, ಮಿರ್ ವಾಯಿಜ್ ರಂತಹ ಜನರನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವುದು ಬಹಳ ಸುಲಭ. ನಾನು ಯಾರ ಬಗ್ಗೆಯೂ ಟೀಕೆ ಮಾಡಲು ಇಚ್ಚಿಸುತ್ತಿಲ್ಲ. ಆದರೆ, ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಡಲು ವಿರೋಧ ವ್ಯಕ್ತಪಡಿಸಬೇಕೆಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.
ಯಾವುದೇ ಒಬ್ಬ ಆಟಗಾರ ಪಾಕಿಸ್ತಾನದ ವಿರುದ್ಧ ಆಟವಾಡಲು ವಿರೋಧ ವ್ಯಕ್ತಪಡಿಸಿದ್ದೇ ಆಗಿದ್ದರೆ, ದೇಶದ ಜನತೆಗೆ ಭಾರತ ಕ್ರಿಕೆಟ್ ತಂಡದ ಮೇಲಿರುವ ಗೌರವ ಮತ್ತಷ್ಟು ಹೆಚ್ಚಾಗುತ್ತಿತ್ತು. ಮಿರ್ ವಾಯಿಜ್ ರಂತಹಪ್ರತ್ಯೇಕತಾವಾದಿಗಳು ಯಾವಾಗಲೂ ಪಾಕಿಸ್ತಾನದ ಪರವಾಗಿಯೇ ಇರುತ್ತಾರೆ. ಭಾರತದಲ್ಲಿದ್ದುಕೊಂಡು ಆವರು ಪಾಕಿಸ್ತಾನದ ಪರವಾಗಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಹಾಗೂ ಅವರ ವರ್ತನೆಯನ್ನು ಸರ್ಕಾರ ಗಮನಿಸಬೇಕಿದೆ ಎಂದು ತಿಳಿಸಿದ್ದಾರೆ.