ನವದೆಹಲಿ: ಕಳೆದ ಜನವರಿ ತಿಂಗಳಿನಲ್ಲಿ ಉಗ್ರರ ದಾಳಿಗೆ ಗುರಿಯಾಗಿದ್ದ ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಗೆ ಭದ್ರತಾ ಲೋಪವೇ ಕಾರಣ ಎಂದು ತನಿಖಾ ವರದಿಯಲ್ಲಿ ತಿಳಿದುಬಂದ ಹಿನ್ನಲೆಯಲ್ಲಿ ಏರ್ ಕಮಾಂಡರ್ ಜೆ.ಎಸ್ ಧಮೂನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಾಯುನೆಲೆ ಮೇಲಿನ ದಾಳಿಗೆ ಭದ್ರತಾ ಲೋಪವೇ ಕಾರಣ ಎಂದು ಐಎಎಫ್ ತನಿಖಾ ವರದಿಯಲ್ಲಿ ಉಲ್ಲೇಖ ಮಾಡಿತ್ತು. ದಾಳಿ ವೇಳೆ ವಾಯುನೆಲೆ ಮೇಲಿನ ನಿಯಂತ್ರಣ ಕಾರ್ಯದಲ್ಲಿದ್ದ ಏರ್ ಕಮಾಂಡ್ ಜೆ.ಎಸ್ ಧಮೂನ್ ಅವರು ವಿಫಲರಾಗಿದ್ದರು ಎಂದು ತಿಳಿಸಿತ್ತು. ಈ ಹಿನ್ನಲೆಯಲ್ಲಿ ಧಮೂನ್ ಅವರು ರಾಜೀನಾಮೆ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
ತನಿಖಾ ವರದಿಯಲ್ಲಿ ಏರ್ ಕಮಾಂಡರ್ ಮತ್ತು ಇತರರ ವೈಫಲ್ಯಗಳನ್ನು ಬಹಿರಂಗ ಪಡಿಸಲಾಗಿದೆ. ಅಲ್ಲದೆ, ವಾಯುನೆಲೆಯ ಒಳ ಮತ್ತು ಹೊರಗೆ ಗಂಭೀರ ಭದ್ರತಾ ವೈಫಲ್ಯವಿರುವುದನ್ನು ತಿಳಿಸಲಾಗಿದೆ.
ಕಳೆದ ಜನವರಿ 2 ರಂದು ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರು. 3 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರು. ದಾಳಿ ಬಳಿಕ ಧಮೂನ್ ಅವರನ್ನು ವರ್ಗಾವಣೆ ಮಾಡಲಾಗಿತ್ತು.