ದೇಶ

ಜಿಎಸ್ ಟಿ ಪ್ರಚಾರದಿಂದ ಹಿಂದೆ ಸರಿಯಿರಿ: ಅಮಿತಾಬ್ ಬಚ್ಚನ್ ಗೆ ಕಾಂಗ್ರೆಸ್ ಸಲಹೆ

Sumana Upadhyaya
ಮುಂಬೈ: ವ್ಯಾಪಾರಿಗಳ ಕೆಂಗಣ್ಣಿಗೆ ಗುರಿಯಾಗುವುದನ್ನು ಮತ್ತು ಪ್ರತಿಭಟನೆಯನ್ನು ತಪ್ಪಿಸಲು ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ ಮಸೂದೆಯ ಪ್ರಚಾರದಿಂದ ಹಿಂದೆ ಸರಿಯುವಂತೆ  ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಗೆ  ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಒತ್ತಾಯಿಸಿದ್ದಾರೆ. ಈ ಮೂಲಕ ಸರಕು ಮತ್ತು ಸೇವಾ ತೆರಿಗೆಯನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ, ವಿವಾದ ಎಬ್ಬಿಸಲಿದೆ ಎಂಬ ಮುನ್ಸೂಚನೆಯನ್ನು ಅವರು ನೀಡಿದ್ದಾರೆ.
ಜಿಎಸ್ಟಿ ಕಾಂಗ್ರೆಸ್ ಪಕ್ಷದ ಅದ್ಭುತ ಕಲ್ಪನೆ.ಅಂದು ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಇದನ್ನು ವಿರೋಧಿಸಿತ್ತು ಎಂಬುದು ಬೇರೆ ವಿಚಾರ. ಆದರೆ ಅದೇ ಬಿಜೆಪಿ ಅಧಿಕಾರಕ್ಕೆ ಬಂದ ನಂತರ  ಸರಕು ಮತ್ತು ಸೇವಾ ತೆರಿಗೆಯ ಮೂಲ ಪರಿಕಲ್ಪನೆಗಳನ್ನು ದುರ್ಬಲಗೊಳಿಸಲು ಆರಂಭಿಸಿತು.ಅದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಇಡೀ ದೇಶಕ್ಕೆ ಏಕರೂಪ ತೆರಿಗೆಯಾಗಿ ಜಿಎಸ್ಟಿಯನ್ನು ಜಾರಿಗೆ ತರಲು ಕಾಂಗ್ರೆಸ್ ಬಯಸಿದರೆ, ಬಿಜೆಪಿ ಜಿಎಸ್ ಟಿಯ ಮೂರು ವಿವಿಧ ಉಪ ವಿಧಗಳು ಮತ್ತು ನಾಲ್ಕು ತೆರಿಗೆ ಹಂತಗಳಲ್ಲಿ ಜಾರಿಗೆ ತರುತ್ತಿದೆ,ಅದನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ಹೇಳಿದರು.
ಮಸೂದೆ ಈಗ ತುಂಬಾ ಜಟಿಲವಾಗಿದೆ. ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರು ಪ್ರತಿ ತಿಂಗಳು ಮೂರು ಅರ್ಜಿಗಳನ್ನು ತುಂಬಬೇಕಾಗಿದೆ. ಹೀಗೆ ಜಿಎಸ್ಟಿಯ ಮೂಲ ಉದ್ದೇಶವನ್ನು ಹಾಳುಮಾಡಲಾಗಿದೆ. ಬೇರೆ ದೇಶಗಳಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆಯಂತೆ ಇದೀಗ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವುದು ಇಲ್ಲ ಎಂದರು.
ನಾವು ಅನುಮೋದಿಸಿದ ಮಸೂದೆಯನ್ನೇ ಇಂದು ವಿರೋಧಿಸುತ್ತಿದ್ದೇವೆ ಎಂದು ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಆದರೆ ಅದು ನಿಜವಲ್ಲ. ನಾವು ಯಾವಾಗಲೂ ಜಿಎಸ್ ಟಿ ಪರ ಇದ್ದೆವು. ಆದರೆ ಈ ವಿಧಾನದಲ್ಲಿ ಅಲ್ಲ ಎಂದು ಸಂಜಯ್ ನಿರುಪಮ್ ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದೇಶದ ಜನರನ್ನು ಮೂರ್ಖ ಮಾಡಲು ಹೊರಟಿರುವ ಜಿಎಸ್ ಟಿ ಬಗ್ಗೆ   ಪ್ರಚಾರದಲ್ಲಿ ಭಾಗಿಯಾಗಬೇಡಿ ಎಂದು ನಟ ಅಮಿತಾಬ್ ಬಚ್ಚನ್ ಅವರನ್ನು ಕೋರುತ್ತೇನೆ. ಅವರಿಗೆ ಸಮಾಜದಲ್ಲಿ ಇರುವ ಗೌರವವನ್ನು ಕಳೆದುಕೊಳ್ಳಬೇಡಿ ಎಂದು ಕೋರುತ್ತೇನೆ ಎಂದು ಹೇಳಿದರು.
ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಮತ್ತು ಕಸ್ಟಮ್ಸ್ 74 ವರ್ಷದ ನಟ ಅಮಿತಾಬ್ ಬಚ್ಚನ್ ಅವರನ್ನು ಜಿಎಸ್ ಟಿಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ. ಈ ಬಗ್ಗೆ ಸ್ವತಃ ಅಮಿತಾಬ್ ಬಚ್ಚನ್ ಅವರೇ ಟ್ವೀಟ್ ಮಾಡಿದ್ದರು.
SCROLL FOR NEXT