ನವದೆಹಲಿ: ಘಾಜಿಯಾಬಾದ್ – ದೆಹಲಿ – ಮಥುರಾ ರೈಲಿನಲ್ಲಿ ಗುರುವಾರ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದ್ದು, ಘಟನೆಯಲ್ಲಿ 16 ವರ್ಷದ ಜುನೈದ್ ಎಂಬುವರು ಮೃತಪಟ್ಟಿದ್ದಾರೆ.
ಹರಿಯಾಣದ ವಲ್ಲಬ್‌ಘರ್‌ದ ನಿವಾಸಿ ಜುನೈದ್ ತನ್ನ ಇಬ್ಬರು ಸೋದರ ಸಂಬಂಧಿಗಳಾದ ಹಶೀಮ್ ಮತ್ತು ಶಕೀರ್ ಜತೆಗೆ ದೆಹಲಿಯ ಸದರ್ ಬಜಾರ್‌ನಲ್ಲಿ ನಿನ್ನೆ ಹಬ್ಬದ ಖರೀದಿ ಮುಗಿಸಿ ರೈಲಿನಲ್ಲಿ ಊರಿಗೆ ಮರಳುತ್ತಿದ್ದರು. ಓಖ್ಲಾ ನಿಲ್ದಾಣ ಸಮೀಪಿಸುತ್ತಿದ್ದ ವೇಳೆ ಆಸನಕ್ಕಾಗಿ ಈ ಮೂವರು ಹಾಗೂ ಮತ್ತೊಂದು ಗುಂಪಿನ ನಡುವೆ ಜಗಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೂರು ಮಂದಿ ಗೋಮಾಂಸ ತೆಗೆದುಕೊಂಡು ಹೋಗುತ್ತಿದ್ದಾರೆಂದು ಗುಂಪಿನಲ್ಲಿದ್ದವರು ಆರೋಪಿಸಿದ್ದಾರೆ. ಜಗಳ ಹೆಚ್ಚಾಗಿ ಗುಂಪಿನಲ್ಲಿದ್ದವರು ಈ ಮೂರು ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮೂರು ಮಂದಿಗೂ ಚಾಕುವಿನಿಂದ ಇರಿಯಲಾಗಿದೆ. ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಜುನೈದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆದರೆ, ಗೋಮಾಂಸ ತೆಗೆದುಕೊಂಡು ಹೋಗುತ್ತಿರುವುದಕ್ಕೆ ಜಗಳ ನಡೆದಿದೆ ಎಂಬುದನ್ನು ಅಲ್ಲಗಳೆದಿರುವ ರೈಲ್ವೆ ಪೊಲೀಸರು, ಇದು ಕೇವಲ ಆಸನಕ್ಕಾಗಿ ನಡೆದ ಜಗಳ ಎಂದು ಹೇಳಿದ್ದಾರೆ. ಅಲ್ಲದೆ ಗಾಯಗೊಂಡ ಹಶೀಮ್ ಮತ್ತು ಶಕೀರ್ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics