ದೇಶ

ಪ್ರತ್ಯೇಕತಾವಾದಿ ಮಿರ್'ವಾಯಿಜ್'ಗೆ ನೀಡಿರುವ ಭದ್ರತೆ ಹಿಂಪಡೆಯಬೇಕು: ಸುಬ್ರಮಣಿಯನ್ ಸ್ವಾಮಿ

Manjula VN
ನವದೆಹಲಿ: ಹಿರಿಯತ್ ಕಾನ್ಫರೆನ್ಸ್ ಮುಖ್ಯಸ್ಥ ಮಿರ್'ವಾಯಿಜ್ ಉಮರ್ ಫರೂಕ್ ಅವರಿಗೆ ನೀಡುತ್ತಿರುವ ಭದ್ರತೆಯನ್ನು ಕೂಡಲೇ ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಶುಕ್ರವಾರ ಹೇಳಿದ್ದಾರೆ. 
ಮಸೀದಿ ಬಳಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಆಯುಬ್ ಪಂಡಿತ್ ಅವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಉಗ್ರರ ಪರವಾಗಿ ನಿಲ್ಲುತ್ತಿರುವವರಿಗೆ ಪೊಲೀಸರು ಭದ್ರತೆಯನ್ನು ನೀಡುತ್ತಿದ್ದಾರೆ. ಭದ್ರತೆ ಪಡೆದುಕೊಳ್ಳುತ್ತಿರುವವರೇ ಇಂದು ಉಗ್ರರಾಗಿದ್ದಾರೆ. ಜನರ ತೆರಿಗೆ ಹಣವನ್ನು ಬಳಸಿ ಇಂತಹ ಜನರಿಗೆ ಭದ್ರತೆ ನೀಡುವುದರಲ್ಲಿ ಅರ್ಥವಿಲ್ಲ. ಕೇಂದ್ರ ಸರ್ಕಾರ ಕೂಡಲೇ ಮಿರ್ ವಾಯಿಜ್ ಗೆ ನೀಡುತ್ತಿರುವ ಭದ್ರತೆಯನ್ನು ಹಿಂಪಡೆಯಬೇಕೆಂದು ಹೇಳಿದ್ದಾರೆ. 
ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣ ಸಂಬಂಧ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ಮಿರ್ ವಾಯಿಜ್ ಅವರು, ಆಯುಬ್ ಪಂಡಿತ್ ಅವರ ಹತ್ಯೆ ಪ್ರಕರಣ ಸಾಕಷ್ಟು ಬೇಸರವನ್ನುಂಟು ಮಾಡಿದೆ. ಆದರೆ, ಪ್ರಕರಣ ಸಂಬಂಧ ಮಾಧ್ಯಮಗಳು ಮಾಡುತ್ತಿರುವ ವರದಿ ತಪ್ಪಾಗಿವೆ. ಘಟನೆ ನಡೆದ ಸಂದರ್ಭದಲ್ಲಿ ನಾನು ಕೂಡ ಮಸೀದಿಯೊಳಗಿದ್ದೆ. 12.15ರ ಸುಮಾರಿಗೆ ನಾನು ಮಸೀದಿಗೆ ತೆರಳಿದ್ದೆ. ಅದಕ್ಕೂ ಮುನ್ನವೇ ಘಟನೆ ನಡೆದು ಹೋಗಿತ್ತು. 
ನೌಹಟ್ಟಾದಲ್ಲಿನ ಜಾಮಿಯಾ ಮಸೀದಿ ಹೊರಾಂಗಣದಲ್ಲಿ ಘಟನೆ ನಡೆದಿದೆ. ಇದು ನಿಜಕ್ಕೂ ದುರಾದೃಷ್ಟಕರ. ಹತ್ಯೆಯಿಂದಾಗಿ ಸಾಕಷ್ಟು ನೋವಾಗಿದೆ. ಧಾರ್ಮಿಕ ಕ್ಷೇತ್ರದ ಹೊರಭಾಗದಲ್ಲಿಯೇ ಸಾರ್ವಜನಿಕರು ಹಿಂಸಾಚಾರ ನಡೆಸಿರುವುದು ಸರಿಯಲ್ಲ ಹೇಳಿದ್ದರು. 
SCROLL FOR NEXT