ದೇಶ

ಜಮ್ಮು-ಕಾಶ್ಮೀರ: ಕುಟುಂಬಸ್ಥರ ಬೈಗುಳದಿಂದ ಬೇಸತ್ತು ಗಡಿ ದಾಟಲು ಯತ್ನಿಸಿದ ಬಾಲಕರು

Manjula VN
ಶ್ರೀನಗರ: ಕುಟುಂಬಸ್ಥರ ಬೈಗುಳ ಹಾಗೂ ಜೀವನಶೈಲಿಯಿಂದ ಬೇಸತ್ತು ಶಸ್ತ್ರಾಸ್ತ್ರ ತರಬೇತಿ ಪಡೆಯುವ ಸಲುವಾಗಿ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ದಾಟಲು ಯತ್ನಿಸುತ್ತಿದ್ದ ನಾಲ್ವರು ಅಪ್ರಾಪ್ತ ಬಾಲಕರನ್ನು ಸೇನಾಪಡೆ ಬಂಧನಕ್ಕೊಳಪಡಿಸಿದೆ. 
ವಿದ್ಯಾಭ್ಯಾಸ ಹಾಗೂ ಇತರೆ ವಿಚಾರಗಳ ಕುರಿತಂತೆ ಪೋಷಕರು ಪ್ರತಿನಿತ್ಯ ಬೈಯುತ್ತಿದ್ದರು. ಅಲ್ಲದೆ, ನಮ್ಮ ಜೀವನಶೈಲಿ ಕೂಡ ನಮಗೆ ಬೇಸರವನ್ನು ತಂದಿದೆ ಹೀಗಾಗಿ ಗಡಿ ದಾಟಲು ನಿರ್ಧರಿಸಿದ್ದೆವು ಎಂದು ಬಾಲಕರು ವಿಚಾರಣೆ ವೇಳೆ ಹೇಳಿದ್ದಾರೆಂದು ಕುಪ್ವಾರ ಎಸ್ಎಸ್'ಪಿ ಶಂಶೀರ್ ಹುಸೇನ್ ಅವರು ಹೇಳಿದ್ದಾರೆ. 
ಶಾಹಿದ್ ಅಹ್ಮದ್ ಪಿರ್ (14), ವಹೀದ್ ಅಹ್ಮದ್ ಗೋಜ್ರೀ (15), ಜೀಶಾನ್ ಅಹ್ಮದ್ ಲೋನ್ (15) ಮತ್ತು ಉಬೈದ್ ಅಹ್ಮದ್ ಗೊಜ್ರೀ (16) ಬಂಧಿತ ಬಾಲಕರನಾಗಿದ್ದಾರೆ. 
ಬಾಲಕರು ಗುಲ್ಗಾಂ ಪ್ರದೇಶದ ನಿವಾಸಿಗಳಾಗಿದ್ದಾರೆ. ಬಾಲಕರು ನಾಪತ್ತೆಯಾಗಿರುವುದಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಬಾಲಕರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. 
ಹುಡುಕಾಟ ನಡೆಸುತ್ತಿದ್ದ ವೇಳೆ ಕುಪ್ವಾರದ ಗಡಿ ನಿಯಂತ್ರಣ ರೇಖೆ ಬಳಿಯಿರುವ ಅರಣ್ಯ ಪ್ರದೇಶದ ಬಳಿ ಬಾಲಕರು ದೊರಕಿದ್ದರು. ನಂತರ ಬಾಲಕರನ್ನು ಕುಪ್ವಾರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. 
ಬಾಲಕರಿಗೆ ಸೂಕ್ತ ರೀತಿಯ ಸಲಹೆಗಳನ್ನು ನೀಡಲಾಗಿದ್ದು, ಆರೋಗ್ಯಕರ ಹಾಗೂ ಉತ್ತಮವಾದ ಜೀವನವನ್ನು ಅಳವಡಿಸಿಕೊಳ್ಳುವ ಸಲುವಾಗಿ ಅವಕಾಶವನ್ನು ನೀಡಲಾಗಿದೆ. ಇದರಂತೆ ಬಾಲಕರನ್ನು ಪೋಷಕರ ವಶಕ್ಕೆ ನೀಡಲಾಗಿದೆ. ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ಪ್ರಕರಣದಲ್ಲಿ ಮತ್ತಿತರೆ ಹೊರ ವ್ಯಕ್ತಿಗಳಾರಾದರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹುಸೇನ್ ತಿಳಿಸಿದ್ದಾರೆ. 
SCROLL FOR NEXT