ಪಣಜಿ: ರಾಷ್ಟ್ರಪ್ರವಾಸ ಕೈಗೊಂಡಿರುವ ಅಮಿತ್ ಶಾ ಜು.1 ರಂದು ಗೋವಾಗೆ ತೆರಳಲಿದ್ದು, ಗೋವಾ ಬಿಜೆಪಿ ಮಿತ್ರಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿ ಭೋಜನ ಸವಿಯಲಿದ್ದಾರೆ.
ಬೆಳಿಗ್ಗೆ 11.15 ಕ್ಕೆ ಅಮಿತ್ ಶಾ ಡಬೋಲಿಮ್ ವಿಮಾನ ನಿಲ್ದಾಣ ತಲುಪಲಿದ್ದು, ಪಕ್ಷದ ರಾಷ್ಟ್ರಾಧ್ಯಕ್ಷರನ್ನು ಸ್ವಾಗತಿಸಲು 2,500 ಬಿಜೆಪಿ ಕಾರ್ಯಕರ್ತರು ಸಿದ್ಧಗೊಂಡಿದ್ದಾರೆ ಎಂದು ಬಿಜೆಪಿ ಹೇಳಿಕೆ ಬಿಡುಗಡೆ ಮಾಡಿದೆ. ಆಜಾದ್ ಮೈದಾನದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ಬಳಿಕ ಅಮಿತ್ ಶಾ ಬಿಜೆಪಿ ಶಾಸಕರು ಹಾಗೂ ಮಿತ್ರ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.
ನಂತರ ಬಿಜೆಪಿ ಪಕ್ಷದ ವಿವಿಧ ಚುನಾಯಿತ ಪ್ರತಿನಿಧಿಗಳನ್ನುದ್ದೇಶಿಸಿ ಸಂಜೆ 4:30 ಕ್ಕೆ ಭಾಷಣ ಮಾಡಲಿದ್ದಾರೆ. ಇದಾದ ಬಳಿಕ ಕೈಗರಿಕೋದ್ಯಮಿಗಳು, ವೈದ್ಯಕೀಯ ಸಮುದಾಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರುವವರೊಂದಿಗೆ ಅಮಿತ್ ಶಾ ಸಂವಹನ ನಡೆಸಲಿದ್ದಾರೆ.