ಚೆನ್ನೈ: ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿಯನ್ನು ಜಾರಿಗೊಳಿಸಲು ಕ್ಷಣಗಣನೆ ಆರಂಭವಾಗಿರುವಂತೆಯೇ ಅತ್ತ ತಮಿಳುನಾಡಿನ ಶಿವಕಾಶಿ ಪಟಾಕಿ ವರ್ತಕರು ಮಾತ್ರ ಕಾಯ್ದೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಎಸ್ ಟಿ ಜಾರಿಯಿಂದಾಗಿ ಮಧ್ಯಮ ಗಾತ್ರದ ಪಟಾಕಿ ತಯಾರಿಕರಿಗೆ ವ್ಯಾಪಕ ಅನಾನುಕೂಲವಾಗಲಿದ್ದು, ಶೇ.28ರಷ್ಟು ತೆರಿಗೆ ಸಂಗ್ರಹ ಅಸಾಧ್ಯ ಎಂದು ತಮಿಳುನಾಡಿನ ವಿರುದ್ಧ್ ನಗರದಲ್ಲಿರುವ ಶಿವಕಾಶಿ ಪಟಾಕಿ ವರ್ತಕರು ಹೇಳಿದ್ದಾರೆ. ಈ ಬಗ್ಗೆ ವರ್ತಕರು ಮಾಧ್ಯಮಗಳೊಂದಿಗೆ ತಮ್ಮ ಅಸಮಾಧಾನ ತೋಡಿಕೊಂಡಿದ್ದು, ಜಿಎಸ್ ಟಿ ಜಾರಿಯಿಂದಾಗಿ ತಮ್ಮ ಮೇಲೆ ಶೇ.28ರಷ್ಟು ತೆರಿಗೆ ಹೊರೆ ಬೀಳುತ್ತದೆ. ಒಂದು ವೇಳೆ ನೂತನ ತೆರಿಗೆ ನೀತಿ ಜಾರಿಯಾಗಿದ್ದೇ ಆದರೆ ಅದು ನಮ್ಮ ಪಾಲಿಗೆ ಮರಣಶಾಸನವಾಗಲಿದೆ. ಪ್ರಮುಖವಾಗಿ ಸಣ್ಣ ಮತ್ತು ಮಧ್ಯಮ ಗಾತ್ರ ಪಟಾಕಿ ತಯಾರಿಕಾ ಕಾರ್ಖಾನೆಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಭಾರತೀಯ ಪಟಾಕಿ ತಯಾರಿಕಾ ಕಾರ್ಖಾನೆಗಳು ಚೀನಾ ಪಟಾಕಿ ಕಾರ್ಖಾನೆಗಳಿಂದ ವ್ಯಾಪಕ ಸ್ಪರ್ಧೆ ಎದುರಿಸುತ್ತಿದ್ದೇವೆ. ಚೀನಾ ಪಟಾಕಿಗಳಿಂದಾಗಿ ದೇಶೀಯ ಪಟಾಕಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಹೀಗಿರುವಾಗ ಅತ್ಯಂತ ಕಡಿಮೆ ಲಾಭಾಂಶದಲ್ಲಿ ಪಟಾಕಿ ತಯಾರಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಜಿಎಸ್ ಟಿ ಜಾರಿಗೆ ತರಲು ಸಿದ್ಧತೆ ನಡೆಸಿದ್ದು, ಇದು ವಲಯದ ಮೇಲೆ ವ್ಯಾಪಕ ದುಷ್ಪರಿಣಾಮ ಬೀರಲಿದೆ. ಒಂದು ವೇಳೆ ಜಿಎಸ್ ಟಿ ಜಾರಿಗೆ ಬಂದರೆ ನಾವು ಪಟಾಕಿ ತಯಾರಿಕೆಯನ್ನೇ ಸ್ಥಗಿತಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ಶಿವಕಾಶಿಯಲ್ಲಿ ಒಟ್ಟು 821 ಪಟಾಕಿ ತಯಾರಿಕಾ ಘಟಕಗಳಿದ್ದು, ಇವುಗಳು 2000 ಕೋಟಿ ವಹಿವಾಟು ನಡೆಸುತ್ತಿವೆ. ಈ ಪೈಕಿ ಇಂದಿಗೂ ಬಹುತೇಕ ಘಟಕಗಳು ಸಣ್ಣ ಸಣ್ಣ ಶೆಡ್ ಗಳಲ್ಲಿ ಪಟಾಕಿ ತಯಾರಿಕೆ ಮಾಡುತ್ತಿದೆ. ಈಗಾಗಲೇ ಈ ಘಟಕಗಳು 14.5ರಷ್ಟು ಮೌಲ್ಯವರ್ಧಿತ ತೆರಿಗೆ ಹಾಗೂ 12.5ರಷ್ಟು ಕೇಂದ್ರ ಎಕ್ಸೈಸ್ ತೆರಿಗೆಯನ್ನು ಪಾವತಿ ಮಾಡುತ್ತಿವೆ. ಈ ಪೈಕಿ ವರ್ತಕರು ಶೇ.12.5 ರಷ್ಟು ತೆರಿಗೆ ವಿನಾಯ್ತಿ ಪಡೆದಿವೆ. ಇದೀಗ ಕೇಂದ್ರ ಜಿಎಸ್ ಟಿ ಮೂಲಕ ಶೇ.28ರಷ್ಟು ತೆರಿಗೆ ವಿಧಿಸಿದರೆ, ಖಂಡಿತಾ ಈ ಘಟಕಗಳು ಬಾಗಿಲು ಹಾಕುತ್ತವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಜಿಎಸ್ ಟಿಯನ್ನು ಒಪ್ಪಿದರೆ ಆಗ ಪಟಾಕಿ ಬೆಲೆಗಳನ್ನು ಈಗಿರುವ ದರಕ್ಕಿಂತ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ದುಬಾರಿ ಬೆಲೆಯಿಂದಾಗಿ ಗ್ರಾಹಕರು ಪಟಾಕಿ ಖರೀದಿಗೆ ಆಸಕ್ತಿ ತೋರುವುದಿಲ್ಲ ಎಂದೂ ವರ್ತಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.