ದೇಶ

ತಂಜಾವೂರಿನಲ್ಲಿ ಒ ಎನ್ ಜಿ ಸಿ ತನ್ನ ಕಾರ್ಯಚಟುವಟಿಕೆ ನಿಲ್ಲಿಸಬೇಕು: ಪಿಎಂಕೆ ಆಗ್ರಹ

Guruprasad Narayana
ಚೆನ್ನೈ: ಪೈಪ್ಲೈನ್ ಒಡೆದು ತೈಲ ಸೋರಿಕೆಯಾಗಿದ್ದಕ್ಕೆ ಪ್ರತಿಭಟಿಸಿದ್ದ ಜನರ ಮೇಲೆ ಪೋಲೀಸರ ಕ್ರಮವನ್ನು ಖಂಡಿಸಿರುವ ರಾಜಕೀಯ ಪಕ್ಷಗಳ ಮುಖಂಡರು, ತಮಿಳುನಾಡಿನ ತಂಜಾವೂರಿನಲ್ಲಿ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ಒ ಎನ್ ಜಿ ಸಿ) ತನ್ನ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಶನಿವಾರ ಇದರ ಬಗ್ಗೆ ಹೇಳಿಕೆ ನೀಡಿದ ಪಿಎಂಕೆ ಪಕ್ಷದ ಮುಖಂಡ ಅಂಬುಮಣಿ ರಾಮದಾಸ್, ಕದಿರಮಂಗಲಂ ಗ್ರಾಮದಲ್ಲಿ ಒ ಎನ್ ಜಿ ಸಿ ಕೂಡಲೇ ತನ್ನ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಮತ್ತು ನಿಯೋಜಿಸಲಾಗಿರುವ ಪೊಲೀಸ್ ಪಡೆಗಳನ್ನು ವಿಸರ್ಜಿಸಬೇಕು ಎಂದು ಆಗ್ರಹಿಸಿದ್ದಾರೆ. 
ತಮ್ಮ ಬೇಡಿಕೆಗಳನ್ನು ಪೂರೈಸದಿದ್ದರೆ, ಗ್ರಾಮದ ಪ್ರತಿಭಟನೆಗಳಲ್ಲಿ ಪಾಲ್ಗೊಂಡು ಅಲ್ಲಿಯೇ ಶಿಬಿರ ಹೂಡುವುದಾಗಿ ಕೂಡ ರಾಮದಾಸ್ ಹೇಳಿದ್ದಾರೆ. 
ತಮಿಳುನಾಡಿನ ಅನ್ನದ ಪಾತ್ರೆ ಎಂದೇ ಕರೆಯಲಾಗುವ ತಂಜಾವೂರು ಚೆನ್ನೈನಿಂದ ೩೫೦ ಕಿಲೋಮೀಟರ್ ದೂರದಲ್ಲಿದೆ. ರಾಮದಾಸ್ ಅವರು ತಿಳಿಸುವಂತೆ ಮುಂದುವರೆದ ರಾಷ್ಟಗಳಲ್ಲಿ, ಜನ ವಿರಳವಾಗಿರುವ ಪ್ರದೇಶಗಳಲ್ಲಿ ಪೈಪ್ಲೈನ್ ಗಳನ್ನೂ ಹಾಕುತ್ತಾರೆ ಆದರೆ ಒ ಎನ್ ಜಿ ಸಿ  ಅತಿ ಹೆಚ್ಚು ಜನನಿಬಿಡ ಪ್ರದೇಶದಲ್ಲಿ ಈ ಪೈಪ್ಲೈನ್ ಗಳನ್ನು ಹಾಕಿದ್ದು, ಇದು ಅಸುರಕ್ಷಿತ ಎಂದಿದ್ದಾರೆ. 
"ಇದು ಜನರು ಅಗ್ನಿಪರ್ವತದಲ್ಲಿ ವಾಸಿಸಿದಂತೆ" ಎಂದು ಕೂಡ ರಾಮದಾಸ್ ಹೇಳಿದ್ದು, ಶುಕ್ರವಾರ ಜನರ ವಿರುದ್ಧ ಪೊಲೀಸರು ತೆಗೆದುಕೊಂಡಿರುವ ಕ್ರಮವನ್ನು ಅವರು ಖಂಡಿಸಿದ್ದಾರೆ. 
ರಾಜ್ಯದಲ್ಲಿ ಮಿಥೇನ್ ಮತ್ತಿತರ ಜಲ ಸಂಬಂಧಿ ಅನಿಲಗಳನ್ನು ಶೋಧಿಸುವುದಕ್ಕೆ ಅವಕಾಶ ನೀಡದಂತೆ ತಮಿಳುನಾಡು ಸರ್ಕಾರ ನಿರ್ಣಯ ಹೊರಡಿಸಬೇಕು ಎಂದು ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಆಗ್ರಹಿಸಿದ್ದಾರೆ.
೨೦೦೨ ರಲ್ಲಿ ಒ ಎನ್ ಜಿ ಸಿ ತಂಜಾವೂರಿನಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿತ್ತು.
SCROLL FOR NEXT