ಪಿಎಂಕೆ ಅಧ್ಯಕ್ಷ ಎಸ್.ರಾಮದಾಸ್
ಚೆನ್ನೈ: ರಾಷ್ಟ್ರಪತಿ ಚುನಾವಣೆಯಲ್ಲೂ ಕಾವೇರಿ ವಿವಾದವನ್ನು ತಮಿಳುನಾಡಿನ ರಾಜಕೀಯ ಪಕ್ಷಗಳು ಎಳೆದು ತಂದಿದ್ದು, ತಿಂಗಳೊಳಗಾಗಿ ಕಾವೇರಿ ಮಂಡಳಿ ರಚಿಸಿದರೆ ಮಾತ್ರ ಆಡಳಿತಾರೂಢ ಎನ್ ಡಿಎ ಪಕ್ಷದ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತೇವೆಂದು ಹೇಳಿವೆ.
ಈ ಕುರಿತಂತೆ ಮಾತನಾಡಿರುವ ಪಿಎಂಕೆ ಅಧ್ಯಕ್ಷ ಎಸ್.ರಾಮದಾಸ್ ಅವರು, ಒಂದು ತಿಂಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಚನೆ ಮಾಡಬೇಕು. ಆಗ ಮಾತ್ರ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ರಾಮನಾಥ ಕೋವಿಂದ್ ಗೆ ನಾವು ಬೆಂಬಲ ನೀಡುತ್ತೇವೆಂದು ಷರತ್ತು ವಿಧಿಸಿದ್ದಾರೆ.
ರೈತರು ಸಮಸ್ಯೆಗಳು ಹಾಗೂ ಬರಗಾಲ ರಾಜ್ಯದಲ್ಲಿ ಪ್ರಮುಖ ವಿಚಾರವಾಗಿದೆ. ಬರಗಾಲಕ್ಕೆ ಕಳೆದ ವರ್ಷ 500 ರೈತರುಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಗೆ ಪ್ರಮುಖವಾಗಿರುವ ಕಾರಣಗಳಲ್ಲಿ ಕಾವೇರಿ ವಿವಾದ ಕೂಡ ಒಂದು ಎಂದು ಅವರು ಆರೋಪಿಸಿದ್ದಾರೆ.
ಕಾವೇರಿ ವಿವಾದ ಈವರೆಗೂ ಬಗೆಹರಿದಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಕಾವೇರಿ ಮಂಡಳಿ ರಚನೆ ಮಾಡುವುದರಲ್ಲಿ ಕೇಂದ್ರ ಸರ್ಕಾರ ವಿಫಲಾಗಿದೆ. ಅಂತರ್ ರಾಜ್ಯಗಳಲ್ಲಿ ಜಲ ವಿವಾದವಿದ್ದರೂ ಕೇಂದ್ರ ಸರ್ಕಾರ ಮಾತ್ರ ಮೌನವಹಿಸಿದೆ. ತಮಿಳುನಾಡು ರಾಜ್ಯಕ್ಕೆ ಬಿಜೆಪಿ ಸರ್ಕಾರ ಯಾವಾಗಲೂ ವಂಚಿಸುತ್ತಲೇ ಇದೆ. ನೀಟ್, ಹಿಂದಿ ಮತ್ತು ಸಂಸ್ಕೃತ ಹೇರಿಕೆ, ರೈಲ್ವೇ ಯೋಜನೆಗಳಿಗೆ ಹಣ ಬಿಡುಗಡೆ ಮಾಡದಿರುವುದು ಹಾಗೂ ಮೀನುಗಾರರ ಸಮಸ್ಯೆ ಹೀಗೆ ನಾನಾ ವಿಚಾರಗಳಲ್ಲಿ ವಂಚಿಸಿದೆ ಎಂದಿದ್ದಾರೆ.