ಮುಂಬೈ: ವೃತ್ತಿಪರ ಬ್ಯಾಲೆ ನೃತ್ಯಗಾರನಾಗಬೇಕು ಎಂಬ 16 ವರ್ಷದ ಮುಂಬೈ ಸ್ಲಂ ಬಾಲಕನ ಕನಸು ಈಗ ನನಸಾಗುತ್ತಿದ್ದು, ಮದುವೆ ಮತ್ತಿತರ ಸಮಾರಂಭಗಳಲ್ಲಿ ನೃತ್ಯ ಮಾಡುತ್ತಿದ್ದ ಮುಂಬೈನ ಕೊಳಗೇರಿಯ ಬಾಲಕ ಅಮೀರುದ್ದೀನ್ ಶಾ ಈಗ ಅಮೆರಿಕದ ಪ್ರತಿಷ್ಠಿತ ಜಾಕ್ವೆಲಿನ್ ಕೆನಡಿ ಒನಾಸಿಸ್ ಸ್ಕೂಲ್(ಜೆಕೆಒ) ನೃತ್ಯ ಶಾಲೆಗೆ ತರಬೇತಿಗಾಗಿ ಆಯ್ಕೆಯಾಗಿದ್ದಾನೆ.
ಅಮೀರುದ್ದೀನ್ ಶಾ ವೆಲ್ಡರ್ ಒಬ್ಬರ ಮಗನಾಗಿದ್ದು. ಬ್ಯಾಲೆ ನೃತ್ಯ ಪ್ರಕಾರದ ಬಗ್ಗೆ ಆತನಿಗೆ ತಿಳಿದಿದ್ದೇ 2013ರಲ್ಲಿ. ಕೇವಲ ಮೂರು ವರ್ಷಗಳಲ್ಲೇ ನೃತ್ಯದೆಡೆಗಿನ ಆತನ ಆಸಕ್ತಿ ಈಗ ವೃತ್ತಿಪರ ಬ್ಯಾಲೆ ಪಟುವಾಗಿಸಿದೆ. ಆಗಸ್ಟ್‌ನಿಂದಲೇ ಅಮೆರಿಕದಲ್ಲಿ ಆತನ ಬ್ಯಾಲೆ ನೃತ್ಯದ ತರಬೇತಿ ಆರಂಭವಾಗಲಿದೆ.
ಮೂರು ವರ್ಷಗಳ ಹಿಂದೆ ಡ್ಯಾನ್ಸ್ ವರ್ಕ್ಸ್ ಪರ್ಫಾರ್ಮಿಂಗ್ ಆರ್ಟ್ಸ್ ಎಂಬ ನೃತ್ಯ ತರಬೇತಿ ಸಂಸ್ಥೆಯೊಂದು ಬಡ ಮಕ್ಕಳಿಗಾಗಿ ನೃತ್ಯ ತರಬೇತಿ ಹಮ್ಮಿಕೊಂಡಿತ್ತು. ಆಗ ಅಮೀರುದ್ದೀನ್ ಅಲ್ಲಿಗೆ ಸೇರಿ, ಅಲ್ಲಿಯೇ ಅವನ ಅದೃಷ್ಟದ ಹಾದಿ ತೆರೆದುಕೊಂಡಿದೆ. ಇಸ್ರೇಲಿ-ಅಮೆರಿಕ ಬ್ಯಾಲೆ ಮಾಸ್ಟರ್ ಯೆಹುದಾ ಮಾಹೊರ್‌ರ ಈತನನ್ನು ಗುರುತಿಸುತ್ತಾರೆ. ಬಳಿಕ ಅವರದ್ದೇ ಬ್ಯಾಲೆ ಅಕಾಡೆಮಿಯಲ್ಲಿ ಆತನಿಗೆ ಎರಡೂವರೆ ವರ್ಷಗಳ ಕಾಲ ತರಬೇತಿ ನೀಡುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾ, ನಾನು ಒಂದು ಬಡ ಕುಟುಂಬದಿಂದ ಬಂದಿದ್ದೇನೆ. ಬ್ಯಾಲೆಟ್ ಅಥವಾ ಅಮೆರಿಕ ಬಗ್ಗೆ ನನ್ನ ಅಪ್ಪ-ಅಮ್ಮನಿಗೆ ಏನು ಗೊತ್ತಿಲ್ಲ. ಆದರೂ ಅವರು ನನಗೆ ಪ್ರೋತ್ಸಾಹ ನೀಡಿದ್ದಾರೆ. ನಾನು ಅಮೆರಿಕದಲ್ಲಿ ತರಬೇತಿಗೆ ಆಯ್ಕೆಯಾಗಿರುವು ತುಂಬಾ ಖುಷಿ ತಂದಿದೆ ಎಂದಿದ್ದಾರೆ.