ಜೈಪುರ: ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೋದರತ್ತೆ ಎಂದು ಟೀಕಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಅಂಗವಾಗಿ ಜೋನ್ ಪುರ್ ನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅಖಿಲೇಶ್ ಯಾದವ್, ಬಿಎಸ್ ಪಿ ನಾಯಕಿ ಮಾಯಾವತಿ ರ್ಯಾಲಿಗಳಲ್ಲಿ ಮಾತನಾಡುತ್ತಿದ್ದರೇ ಜನ ಕುರ್ಚಿಯಲ್ಲಿ ಕುಳಿತು ನಿದ್ರಿಸುವುದನ್ನು ನಾವು ನೋಡಿದ್ದೇವೆ ಎಂದು ಜರಿದಿದ್ದಾರೆ.
ಮಾಯಾವತಿ ಸೋದರತ್ತೆ (ತಂದೆಯ ಸಹೋದರಿ), ಆದರೆ ಅವರು ಯಾವಾಗ ಸಮಾಜವಾದಿ ಪಕ್ಷದ ಜೊತೆ ರಕ್ಷಾ ಬಂಧನ್ ಆಚರಿಸುತ್ತಾರೆ ಎಂಬುದು ನಮಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಆರು ಹಂತಗಳ ಮತದಾನ ಪ್ರಕ್ರಿಯೆ ಮುಗಿದಿದ್ದು, 7ನೇ ಹಂತದ ಮತದಾನದ ನಂತರ ಸಮಾಜವಾದಿ ಪಕ್ಷ ಮತ್ತೆ ಸರ್ಕಾರ ರಚಿಸುತ್ತದೆ ಎಂದು ಅಖಿಲೇಶ್ ಭರವಸೆ ವ್ಯಕ್ತ ಪಡಿಸಿದ್ದಾರೆ.
ತಮ್ಮ ರ್ಯಾಲಿಗಾಗಿ ನೆರೆದಿರುವ ಜನಸ್ತೋಮವನ್ನು ಪ್ರಧಾನಿ ನರೇಂದ್ರ ಮೋದಿ ನೋಡಿದ್ದರೇ, ನಾವು ಚುನಾವಣೆಯಲ್ಲಿ ಗೆಲ್ಲುವುವುದು ಎಂದು ಅವರಿಗೆ ವಿಶ್ವಾಸ ಮೂಡುತ್ತಿತ್ತು ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷದ ಆಡಳಿತ ಮತ್ತು ನೀತಿ ನಿಯಮಾವಳಿಗಳ ಬಗ್ಗೆ ಜನತೆಗೆ ಹೆಚ್ಚು ನಂಬಿಕೆಯಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಈ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೇ ನಿಮ್ಮ ಜೀವನ ರೀತಿ ಬದಲಿಸಲು ನಾವು ಹೆಚ್ಚಿನ ಕೆಲಸ ಮಾಡುತ್ತೇವೆ ಎಂದು ಅಖಿಲೇಶ್ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಪಿಂಚಣಿ ಯೋಜನೆಯಡಿ ಸದ್ಯ 500 ರು ನೀಡುತ್ತಿದ್ದೇವೆ, ಆದರೆ ಚುನಾವಣೆಯಲ್ಲಿ ಗೆದ್ದ ನಂತರ ಪಿಂಚಣಿಯನ್ನು 500 ರಿಂದ 1ಸಾವಿರ ರು ಗೆ ಏರಿಸುತ್ತೇವೆ ಎಂದು ಅಖಿಲೇಶ್ ಭರವಸೆ ನೀಡಿದ್ದಾರೆ.