ದೇಶ

ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟ: ಮಣಿಪುರ ಬಿಜೆಪಿ ವಿರುದ್ಧ ಎಫ್ಐಆರ್ ದಾಖಲು

Manjula VN
ನವದೆಹಲಿ: ಮಣಿಪುರದಲ್ಲಿ ಮೊದಲನೇ ಹಂತದ ಚುನಾವಣೆ ಆರಂಭವಾಗಿದ್ದು, ಅನುಮತಿಯಿಲ್ಲದೆಯೇ ದಿನಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಮಣಿಪುರ ಬಿಡೆಪಿ ವಿರುದ್ದ ಎಫ್ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ಚುನಾವಣಾ ಆಯೋಗ ಶುಕ್ರವಾರ ಸೂಚನೆ ನೀಡಿದೆ. 
ಪ್ರಮಾಣೀಕರಣ ಮಂಡಳಿಯಿಂದ ಅನುಮತಿ ಪಡೆಯದೆಯೇ ಬಿಜೆಪಿ ನಾಯಕರು ಸ್ಥಳೀಯ ದಿನಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಬಿಜೆಪಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಅಲ್ಲದೆ, ಜಾಹೀರಾತು ಪ್ರಕಟಿಸಿದ 8 ದಿನಪತ್ರಿಕೆಗಳ ವಿರುದ್ಧವೂ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಸಂಗೈ ಎಕ್ಸ್ ಪ್ರೆಸ್ ಮಣಿಪುರಿ, ಪೀಪರ್ ಕ್ರೋನಿಕಲ್, ನಹರೊಲ್ಗಿ, ಥೌಡಂಗ್, ಇಂಫಾಲ ಫ್ರೀ ಪ್ರೆಸ್, ಇಚೆಲ್ ಎಕ್ಸ್ ಪ್ರೆಸ್, ಯುಯೆನ್ ಲ್ಯಾನ್ಪೋ, ಪೊಕ್ನಫಮ್ ಎಂಬ ದಿನಪತ್ರಿಕೆಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಚುನಾವಣಾಧಿಕಾರಿಗಳು ಆದೇಶಿಸಿದ್ದಾರೆಂದು ಹೇಳಲಾಗುತ್ತಿದೆ. 
ಮಣಿಪುರದಲ್ಲಿ ಇಂದಿನಿಂದ ಮೊದಲ ಹಂತದ ಚುನಾವಣೆ ಆರಂಭಗೊಂಡಿದ್ದು, ಈ ನಡುವೆಯೇ ಬಿಜೆಪಿ ಕುರಿತಂತೆ ದಿನಪತ್ರಿಕೆಗಳಲ್ಲಿ ಜಾಹೀರಾತುಗಳು ಪ್ರಕಟಗೊಂಡಿರುವುದಕ್ಕೆ ಚುನಾವಣಾ ಆಯೋಗ ತೀವ್ರ ಕೆಂಡಾಮಂಡಲಗೊಂಡಿದೆ. 
ಚುನಾವಣೆ ಆರಂಭಗೊಳ್ಳುವ 48 ಗಂಟೆಗಳಿಗೂ ಮುನ್ನ ಜಾಹೀರಾತುಗಳನ್ನು ಪ್ರಕಟಿಸಲು ಯಾವುದೇ ಕಟ್ಟಳೆಗಳಿಲ್ಲ. ಆದರೆ, ಇಂತಹ ಸಮಯದಲ್ಲಿ ಜಾಹೀರಾತುಗಳನ್ನು ಪ್ರಕಟಿಸುವುದಕ್ಕೂ ಮುನ್ನ ಪ್ರಮಾಣೀಕೃತ ಸಮಿತಿಯಿಂದ ಅನುಮತಿ ಪಡೆಯಬೇಕು. ಆದರೆ, ಈ ಪ್ರಕರಣದಲ್ಲಿ ದಿನಪತ್ರಿಕೆಗಳು ಅನುಮತಿ ಪಡೆಯದೆಯೇ ಜಾಹೀರಾತುಗಳನ್ನು ಪ್ರಕಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
SCROLL FOR NEXT