ಪುಲ್ವಾಮ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರಿಗಾಗಿ ನಡೆಸಲಾಗುತ್ತಿದ್ದ ಎನ್ ಕೌಂಟರ್ ವೇಳೆ ಭದ್ರತಾ ಪಡೆಗಳು ಹಾಗೂ ಸ್ಥಳೀಯರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಘಟನೆಯಲ್ಲಿ ಓರ್ವ ನಾಗರೀಕ ಸಾವನ್ನಪ್ಪಿರುವುದಾಗಿ ಗುರುವಾರ ಮೂಲಗಳಿಂದ ತಿಳಿದುಬಂದಿದೆ.
ಪುಲ್ವಾಮ ಜಿಲ್ಲೆಯ ಪದಗಂಪೋರ ಗ್ರಾಮದಲ್ಲಿ 4-5 ಉಗ್ರರು ಅಡಗಿ ಕುಳಿತಿದ್ದರು. ಈ ಹಿನ್ನಲೆಯಲ್ಲಿ ಸೇನಾಪಡೆ ಕಳೆದ ರಾತ್ರಿಯಿಂದಲೂ ಕಾರ್ಯಾಚರಣೆ ನಡೆಸುತ್ತಿದೆ. ಇಂದು ಬೆಳಿಗ್ಗೆ ಕೂಡ ಕಾರ್ಯಾಚರಣೆ ನಡೆಸಲಾಗಿದ್ದು, ಇಬ್ಬರು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರರನ್ನು ಹತ್ಯೆ ಮಾಡಿದೆ. ಇಬ್ಬರು ಉಗ್ರರನ್ನು ಜಹಾಂಗೀರ್ ಗೈನ್, ಶಫಿ ಶೆರ್ಗೊಜಿರಿ ಎಂದು ಗುರ್ತಿಸಲಾಗಿದೆ.
ಸೇನಾ ಪಡೆ ಕಾರ್ಯಾಚರಣೆ ವೇಳೆ ಕೆಲ ಸ್ಥಳೀಯರು ಇದಕ್ಕೆ ಅಡ್ಡಿಪಡಿಸಲು ಮುಂದಾಗಿದ್ದು, ಈ ವೇಳೆ ಸೇನಾ ಪಡೆ ಹಾಗೂ ನಾಗರೀಕರ ನಡುವೆ ಘರ್ಷಣೆ ಏರ್ಪಟ್ಟಿದೆ. ಆ ವೇಳೆ ಪೊಲೀಸರು ನಡೆಸಿದ್ದ ಗುಂಡಿನ ದಾಳಿಯಲ್ಲಿ 15 ವರ್ಷದ ಶಾಲಾ ಬಾಲಕನೊಬ್ಬ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ಅಲ್ಲದೆ. ಇಬ್ಬರು ನಾಗರೀಕರಿಗೂ ಗಾಯವಾಗಿರುವುದಾಗಿ ವರದಿಗಳು ತಿಳಿಸಿವೆ. ಪ್ರಸ್ತುತ ಸ್ಥಳದಲ್ಲಿ ಉಗ್ರರು ಇನ್ನೂ ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.