ಪಣಜಿ: ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಭಾನುವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಮತ್ತೆ ಗೋವಾ ಮುಖ್ಯಮಂತ್ರಿಯಾಗುವ ಸಿದ್ಧತೆ ನಡೆಸಿದ್ದಾರೆ.
ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರೂ ಕರಾವಳಿ ರಾಜ್ಯದಲ್ಲಿ ಮತ್ತೆ ಸರ್ಕಾರ ರಚಿಸಲು ಕೇಸರಿ ಪಡೆ ಮುಂದಾಗಿದ್ದು, ಗೋವಾ ಫಾರ್ವರ್ಡ್ ಪಕ್ಷ ಹಾಗೂ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ(ಎಂಜಿಪಿ) ಬಿಜೆಪಿಗೆ ಬೆಂಬಲ ಘೋಷಿಸಿವೆ.
ಇನ್ನು ಪರಿಕ್ಕರ್ ರಾಜಿನಾಮೆ ನಂತರ ಪಣಜಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಗೋವಾದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಆದರೆ ಗೋವಾದ ಅಭಿವೃದ್ಧಿಗಾಗಿ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಸರ್ಕಾರ ರಚಿಸಲು ಯತ್ನಿಸುತ್ತಿದೆ ಎಂದರು.
ಬಿಜೆಪಿ ಬೆಂಬಲ ಘೋಷಿಸಿರುವ ಎಂಜಿಪಿ ನಾಯಕರು ಮನೋಹರ್ ಪರಿಕ್ಕರ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ನಮ್ಮ ಬಳಿ ಬೇಡಿಕೆಯಿಟ್ಟಿದ್ದಾರೆ. ಈ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಚರ್ಚಿಸಿರುವುದಾಗಿ ಗಡ್ಕರಿ ತಿಳಿಸಿದ್ದಾರೆ.
40 ವಿಧಾನಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳನ್ನು ಗೆದ್ದಿರುವ ಕಾಂಗ್ರೆಸ್ ಗೋವಾದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಯಾದರೂ ಬಿಜೆಪಿ ಸರ್ಕಾರ ರಚಿಸಲು ತಯಾರಿ ನಡೆಸಿದೆ. "ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ದಿಂದ ನಮಗೆ ಪತ್ರ ಬಂದಿದ್ದು, ಇಬ್ಬರು ಪಕ್ಷೇತರರೂ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಪ್ರಮೋದ್ ಸಾವಂತ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics