ಇಂಫಾಲ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಪೈಕಿ ಅತಂತ್ರ ವಿಧಾನಸಭೆಯನ್ನು ಎದುರಿಸಿದ್ದ ಮಣಿಪುರದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು ಅಗತ್ಯವಿರುವಷ್ಟು ಶಾಸಕರ ಬೆಂಬಲ ಸಿಕ್ಕಿದೆ. 32 ಶಾಸಕರ ಬೆಂಬಲವಿರುವ ಪತ್ರವನ್ನು ರಾಜ್ಯಪಾಲರಿಗೆ ಈಗಾಗಲೇ ನೀಡಲಾಗಿದ್ದು, ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಖಚಿತವಾಗಿದೆ.
60 ವಿಧಾನಸಭಾ ಕ್ಷೇತ್ರಗಳಿರುವ ಮಣಿಪುರದಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಬಿಜೆಪಿ 21 ಸ್ಥಾನಗಳನ್ನು ಗೆದ್ದಿದ್ದು ಅಧಿಕಾರ ಹಿಡಿಯಲು ಕನಿಷ್ಠ 10 ಶಾಸಕರ ಬೆಂಬಲ ಅಗತ್ಯವಿತ್ತು. ಈಗ ನ್ಯಾಷನಲ್ ಪೀಪಲ್ಸ್ ಪಕ್ಷ (ಎನ್ ಪಿಪಿ)ಯ 4 ಶಾಸಕರು ನಾಗಾ ಪೀಪಲ್ಸ್ ಫ್ರಂಟ್ ನ 4 ಶಾಸಕರು, ಎಲ್ ಜಿಪಿಯ ಓರ್ವ ಶಾಸಕ, ಹಾಗೂ ಮೂವರು ಇತರ ಶಾಸಕರು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಬಿಜೆಪಿಗೆ ಒಟ್ಟು 32 ಶಾಸಕರ ಬೆಂಬಲ ಸಿಕ್ಕಿದ್ದು, ಸರ್ಕಾರ ರಚನೆಯ ಹಾದಿ ಸುಗಮವಾಗಿದೆ.
ಇತ್ತ ಕಾಂಗ್ರೆಸ್ ಸಹ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಾಜಿ ಸಿಎಂ ಇಬೋಬಿ ಸಿಂಗ್, ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವ ಕಾಂಗ್ರೆಸ್ ಪಕ್ಷವನ್ನು ಸರ್ಕಾರ ರಚನೆಗೆ ಮೊದಲು ಆಹ್ವಾನಿಸಬೇಕು ಎಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್ ನ ಓರ್ವ ಶಾಸಕ ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದು, ಬಿಜೆಪಿ ಸರ್ಕಾರ ರಚನೆಯಾಗುವ ಸಾಧ್ಯತೆಗಳು ಸ್ಪಷ್ಟವಾಗಿದೆ. ಸರ್ಕಾರ ರಚನೆ ಬಗ್ಗೆ ಮಾ.12 ರಂದು ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಸರ್ಕಾರ ರಚಿಸುವುದಕ್ಕೆ ಅಗತ್ಯವಿರುವ ಸಂಖ್ಯಾಬಲವನ್ನು ಬಿಜೆಪಿ ಗಳಿಸಲಿದೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics