ಜವಹರಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ ಇತಿಹಾಸ ವಿಭಾಗದಲ್ಲಿ ಎ.ಫಿಲ್ ಪದವಿ ಪಡೆಯುತ್ತಿದ್ದ ಮುತ್ತು ಕೃಷ್ಣನ್
ನವದೆಹಲಿ: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಜೆ.ಮುತ್ತು ಕೃಷ್ಣನ್ ಅಲಿಯಾಸ್ ರಜಿನಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದು, ಇದರಲ್ಲಿ ಅನ್ಯಾಯ ನಡೆದಿರುವ ಬಗ್ಗೆ ಶಂಕಿಸಿದ್ದಾರೆ. ಸಾವಿನ ಹಿಂದಿನ ಕಪಟ ಕೃತ್ಯದ ಬಗ್ಗೆ ಯಾವುದೇ ಸುಳಿವು ಇದುವರೆಗೆ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮುತ್ತು ಕೃಷ್ಣನ್ ಅವರ ಹಾಸ್ಟೆಲ್ ನ ಸ್ನೇಹಿತ ಅಮೃತಾಂಶು ಅವರ ಜೊತೆ ಪೊಲೀಸರು ಮಾತನಾಡಿದ್ದು, ತಾವು ರಜಿನಿಯನ್ನು ಹೋಳಿ ದಿವಸ ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ. ನಾವು ಮತ್ತೊಮ್ಮೆ ಮುತ್ತು ಕೃಷ್ಣನ್ ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡುತ್ತೇವೆ.ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಯಾರೆಲ್ಲಾ ಅವರ ಸಂಪರ್ಕದಲ್ಲಿದ್ದರು ಎಂಬುದನ್ನು ಪರೀಕ್ಷಿಸುತ್ತೇವೆ ಎಂದು ದೆಹಲಿಯ ದಕ್ಷಿಣ ವಲಯ ಡಿಸಿಪಿ ಈಶ್ವರ್ ಸಿಂಗ್ ಹೇಳಿದ್ದಾರೆ.
ಮುತ್ತು ಕೃಷ್ಣ ಇತ್ತೀಚೆಗೆ ಫೇಸ್ ಬುಕ್ ಪುಟದಲ್ಲಿ ವಿಶ್ವವಿದ್ಯಾಲಯದಲ್ಲಿನ ತಾರತಮ್ಯದ ಬಗ್ಗೆ ಬರೆದುಕೊಂಡಿದ್ದರು. ಎಂ.ಫಿಲ್ ಮತ್ತು ಪಿ.ಎಚ್ ಡಿ ಪ್ರವೇಶದಲ್ಲಿ ತಾರತಮ್ಯ ನೀತಿಯನ್ನು ತೋರಲಾಗುತ್ತಿದೆ. ವೈವಾ ವೋಸ್ ನಲ್ಲಿ ಕೂಡ ಸಮಾನತೆಯಿಲ್ಲ, ಹೀಗೆ ವಿಶ್ವವಿದ್ಯಾಲಯದ ಮೇಲೆ ತಮ್ಮ ಅಸಮಾಧಾನ, ಬೇಸರವನ್ನು ಹೊರಹಾಕಿದ್ದರು. ಇದನ್ನು ಮೊನ್ನೆ 10ನೇ ತಾರೀಖಿನಂದು ಕೃಷ್ಣನ್ ಪೋಸ್ಟ್ ಮಾಡಿದ್ದರು.
ಪೊಲೀಸರಿಗೆ ಇದುವರೆಗೆ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಆದರೆ ಮುತ್ತು ಕೃಷ್ಣನ್ ನ ಫೇಸ್ ಬುಕ್ ಪೋಸ್ಟ್ ನ್ನು ಪರಾಮರ್ಶಿಸುತ್ತಿದ್ದಾರೆ.