ಎಡಚಿತ್ರದಲ್ಲಿರುವುದು ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಹಾಕಿದ್ದ ಚಿತ್ರ, ಬಲ ಚಿತ್ರದಲ್ಲಿ ಶರ್ಮಿಷ್ಠಾ ಮುಖರ್ಜಿ
ನವದೆಹಲಿ: ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಮಾಡಿದ್ದ ಟ್ವೀಟ್ ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ರಾಜೀವ್ ಗಾಂಧಿ ಮತ್ತು ಪ್ರಣಬ್ ಮುಖರ್ಜಿಯವರು ಇರುವ ಫೋಟೋವನ್ನು ಹಾಕಿ ಅದಕ್ಕೆ ಶ್ರೀ ರಾಜೀವ್ ಗಾಂಧಿ ಮತ್ತು ಪ್ರಣಬ್ ಮುಖರ್ಜಿಯವರು 1985ರಲ್ಲಿ ಎಂದು ಶೀರ್ಷಿಕೆ ಬರೆದು ಪೋಸ್ಟ್ ಮಾಡಲಾಗಿತ್ತು.
ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಶರ್ಮಿಷ್ಠಾ ಮುಖರ್ಜಿ, ಪ್ರಣಬ್ ಮುಖರ್ಜಿಯವರು ಇಂದಿನ ಭಾರತದ ರಾಷ್ಟ್ರಪತಿಗಳಾಗಿರುವುದರಿಂದ ಅವರ ಹೆಸರಿನ ಮೊದಲು ಶ್ರೀ ಸೇರಿಸುವ ಕನಿಷ್ಟ ಸೌಜನ್ಯವಾದರೂ ಇರಲಿ ಎಂದು ಬರೆದು ಪೋಸ್ಟ್ ಮಾಡಿದ್ದರು. ಟ್ವೀಟ್ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಅದನ್ನು ಅಳಿಸಿತು. ಕಾಂಗ್ರೆಸ್ ನ ಪುಟ ತೆರೆದರೆ ಪುಟ ಸಿಗುವುದಿಲ್ಲ ಎಂಬ ಸಂದೇಶ ಬರುತ್ತದೆ. ಆದರೆ ಅಷ್ಟರಲ್ಲೇ ಕೆಲವರು ಅದರ ಸ್ಕ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡಿದ್ದರು.ನಂತರ ಆಗಿರುವ ಪ್ರಮಾದವನ್ನು ತಿದ್ದಿಕೊಂಡಿರುವ ಕಾಂಗ್ರೆಸ್ ಪ್ರಣಬ್ ಮುಖರ್ಜಿಯವರ ಹೆಸರಿನ ಮೊದಲು ಶ್ರೀ ಸೇರಿಸಿದೆ.