ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್
ನವದೆಹಲಿ: ಇತ್ತೀಚಿನ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಕಳಪೆ ಪ್ರದರ್ಶನಕ್ಕೆ ಎಲೆಕ್ಟ್ರಾನಿಕ್ ಮತಯಂತ್ರದ ದೋಷ ಕಾರಣ ಎಂದು ಆರೋಪ ಮಾಡಿರುವ ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್, ಕೇಜ್ರಿವಾಲ್ ಅವರು ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಕೇಜ್ರಿವಾಲ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ದೆಹಲಿಯಲ್ಲಿ ಅವರಿಗೆ 67 ಸೀಟುಗಳು ಬಂದಾಗ ಆಗ ಎಲ್ಲವೂ ಚೆನ್ನಾಗಿದ್ದವು. ಈಗ ಪಂಜಾಬ್ ನಲ್ಲಿ ಆದ ಸೋಲನ್ನು ಅವರಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅನಗತ್ಯ ತೊಂದರೆ ಸೃಷ್ಟಿಸುತ್ತಿದ್ದಾರೆ ಎಂದರು.
ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಮತ್ತು ಬ್ಯಾಲಟ್ ಬಗ್ಗೆ ಆರೋಪ ಹೊರಿಸುವ ಬದಲು ಅರವಿಂದ ಕೇಜ್ರಿವಾಲ್ ಅವರು ರಾಜಧಾನಿ ದೆಹಲಿಯ ಅಭಿವೃದ್ಧಿ ಕಡೆ ಗಮನಹರಿಸಲಿ ಎಂದರು.
ಅವರು ಯಾವಾಗಲೂ ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಅವರಿಗೆ ಜನರು ಏಕೆ ಬೆಂಬಲ ನೀಡಬೇಕು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪಂಜಾಬ್ ನಲ್ಲಿ ಶಿರೋಮಣಿ ಅಕಾಲಿದಳದ ಸೋಲಿನ ಬಗ್ಗೆ ಅವರು ಅಷ್ಟೊಂದು ಪ್ರಾಮುಖ್ಯತೆ ನೀಡಲಿಲ್ಲ. ಚುನಾವಣೆಯಲ್ಲಿ ಸೋತರೂ ಕೂಡ ಕೊನೆಗೂ ನಮಗೆ ಶೇಕಡಾ 31ರಷ್ಟು ಮತ ಸಿಕ್ಕಿದೆ.ಇದರರ್ಥ ಪಂಜಾಬ್ ನ ಜನತೆ ನಮ್ಮ ಮೇಲೆ ಇನ್ನೂ ನಂಬಿಕೆ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.