ಜವಾಹರ್ ಲಾಲ್ ನೆಹರು ವಿದ್ಯಾರ್ಥಿ ನಜೀಬ್ ಅಹ್ಮದ್
ನವದೆಹಲಿ: ನಾಪತ್ತೆಯಾದಿರುವ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅ್ಯಂಡ್ ಇರಾನ್ ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳಲು ಯತ್ನಿಸಿದ್ದ ಎಂಬ ವರದಿಗಳನ್ನು ದೆಹಲಿ ಪೊಲೀಸರು ಮಂಗಳವಾರ ತಿರಸ್ಕರಿಸಿದ್ದಾರೆ.
ವರದಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದೆಹಲಿ ಪೊಲೀಸ್ ವಕ್ತಾರ ದೀಪೇಂದ್ರ ಪಥಕ್ ಅವರು, ನಜೀಬ್ ಇಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎಂಬುದರ ಬಗ್ಗೆ ತನಿಖೆ ವೇಳೆ ಸಣ್ಣ ಸುಳಿವು ಕೂಡ ದೊರಕಿಲ್ಲ. ಮಾಧ್ಯಮ ಹಾಗೂ ದಿನಪತ್ರಿಕೆಗಳಲ್ಲಿ ಬಂದಿರುವ ಸುದ್ದಿಗಳು ತಪ್ಪು. ಇಸಿಸ್ ನಂಟು ಅಥವಾ ಸೇರ್ಪಡೆ ಬಗ್ಗೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಯಾವುದೇ ವರದಿಗಳನ್ನು ಸಲ್ಲಿಕೆ ಮಾಡಿಲ್ಲ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಎಲ್ಲಾ ರೀತಿಯ ಆಯಾಮಗಳಲ್ಲೂ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಸತ್ಯಾಂಶ ಹೊರಹಾಕಲು ಶ್ರಮ ಪಡುತ್ತಿದ್ದಾರೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ಶೀಘ್ರದಲ್ಲಿಯೇ ಸುರಕ್ಷಿತವಾಗಿ ಕರೆತರುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.