ದೇಶ

ಜಮ್ಮು-ಕಾಶ್ಮೀರದ ಗಾಯವನ್ನು ಮೋದಿಯವರು ಮಾತ್ರ ಗುಣಪಡಿಸಲು ಸಾಧ್ಯ: ಮೆಹಬೂಬಾ ಮುಫ್ತಿ

Manjula VN
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕಾಗಿರುವ ಗಾಯವನ್ನು ಕೇವಲ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತ್ರ ಗುಣಪಡಿಸಲು ಸಾಧ್ಯ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಮಂಗಳವಾರ ಹೇಳಿದ್ದಾರೆ.
ದಕ್ಷಿಣ ಕಾಶ್ಮೀರದ ಅನಂತ್'ನಾಗ್ ಜಿಲ್ಲೆಯಲ್ಲಿ ಪಿಡಿಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಅವರು, ಅಂದಿನ ಪ್ರಧಾನಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಕನಿಷ್ಠ ಪಕ್ಷ ಭೇಟಿ ಕೂಡ ನೀಡಿರಲಿಲ್ಲ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನದ ಜೊತೆಗೆ ಮಾತುಕತೆ ಮಾಡುವ ಮೂಲಕ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆಂದು ಹೇಳಿದ್ದಾರೆ. 
ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸುವ ವ್ಯಕ್ತಿಯಿದ್ದಾರೆ ಎನ್ನುವುದೇ ಆದರೆ, ಅದು ಕೇವಲ ಪ್ರಧಾನಿ ಮೋದಿಯವರು ಮಾತ್ರ. ಮನಮೋಹನ್ ಸಿಂಗ್ ಅವರು 10 ವರ್ಷಗಳ ಕಾಲ ಪ್ರಧಾನಮಂತ್ರಿಯಾಗಿದ್ದರು. ಪಾಕಿಸ್ತಾನದಲ್ಲಿಯೇ ಹುಟ್ಟಿದ್ದರೂ ಆಲ್ಲಿಗೆ ಮಾತ್ರ ಹೋಗುತ್ತಿರಲಿಲ್ಲ. ತಮ್ಮ ಪೂರ್ವಿಕರಿದ್ದ ಮನೆ ಪಾಕಿಸ್ತಾನದಲ್ಲಿಯೇ ಇದ್ದರೂ ಅಲ್ಲಿಗೆ ಹೋಗುವ ಧೈರ್ಯ ಮಾಡುತ್ತಿರಲಿಲ್ಲ. ಮೋದಿಯವರು 2015ರ ಡಿಸೆಂಬರ್ ತಿಂಗಳಿನಲ್ಲಿ ಲಾಹೋರ್'ಗೆ ಹೋಗಿದ್ದರು. ನವಾಜ್ ಷರೀಫ್ ಅವರ ಮನೆಯಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ಹೋಗಿ ಶುಭಾಶಯ ಹೇಳಿ ಬಂದಿದ್ದರು. ಇದಾದ ಬಳಿಕ ಪಠಾಣ್ ಕೋಟ್, ಉರಿ, ಮತ್ತು ನಗ್ರೋಟಾ ದಾಳಿ ನಡೆದಿತ್ತು. 
ಇಷ್ಟಾದರೂ ಪಾಕಿಸ್ತಾನಕ್ಕೆ ಹೋಗುತ್ತಾರೆ...ಮಾತನಾಡುತ್ತಾರೆ ಎಂಬ ವ್ಯಕ್ತಿ ಇದ್ದಾರೆ ಎಂದರೆ ಅದು ಪ್ರಧಾನಿ ಮೋದಿಯವರು ಮಾತ್ರ. ಜಮ್ಮು ಮತ್ತು ಕಾಶ್ಮೀರ ಗಾಯವನ್ನು ಗುಣಪಡಿಸುವ ಶಕ್ತಿ ಇರುವುದು ಕೇವಲ ಮೋದಿಯವರಿಗೆ ಮಾತ್ರ. ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸುವ ಮೂಲಕ ಕಾಶ್ಮೀರದ ನೋವನ್ನು ದೂರ ಮಾಡುತ್ತಾರೆಂದು ತಿಳಿಸಿದ್ದಾರೆ. 
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಚೀನಾ ರಸ್ತೆ ಮಾರ್ಗವನ್ನು ನಿರ್ಮಾಣ ಮಾಡುತ್ತಿದೆ. ಇದು ಚೀನಾ, ಮಧ್ಯ ಏಷ್ಯಾ ಮತ್ತು ದಕ್ಷಿಣ ಏಷ್ಯಾದೊಂದಿಗೆ ರಾಜ್ಯದ ಸಂಪರ್ಕವನ್ನು ಕಲ್ಪಿಸುತ್ತದೆ. ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಅವರ ಉದ್ದೇಶ ಕೂಡ ಇದೇ ಆಗಿತ್ತು. ಜಮ್ಮು ಮತ್ತು ಕಾಶ್ಮೀರದ ಸುತ್ತಮುತ್ತಲೂ ಸಂಪರ್ಕ ಮಾರ್ಗಗಳನ್ನು ತೆರೆಯಬೇಕೆಂದು ಅವರು ಬಯಸಿದ್ದರು. 
1947ರ ಬಳಿಕ ಜಮ್ಮು ಮತ್ತು ಕಾಶ್ಮೀರವನ್ನು ಮುತ್ತಿಗೆ ಹಾಕಲಾಯಿತು. 1947ರಿಂದಲೂ ಹಲವು ನಾಯಕರು ನಮ್ಮನ್ನು ಮೂರ್ಖರನ್ನಾಗಿ ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರದ ಸುತ್ತಮುತ್ತಲೂ ರಸ್ತೆ ಮಾರ್ಗಗಳನ್ನು ತೆರೆದಿದ್ದೇ ಆದರೆ, ದೇಶದಲ್ಲಿ ನಮ್ಮ ರಾಜ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ನಂ.1 ರಾಜ್ಯವಾಗಲಿದೆ. ಹೀಗಾಗಿಯೇ ಮೋದಿಯವರಂತಹ ಒಬ್ಬ ವ್ಯಕ್ತಿ ಕೇಂದ್ರದಲ್ಲಿರಬೇಕೆಂದು ರಾಜ್ಯ ಬಯಸಿತ್ತು. ನಮ್ಮಲ್ಲಿ ಕೇವಲ ವಿದ್ಯುತ್ ಅಷ್ಟೇ ಅಲ್ಲ, ನೀರು, ರಸ್ತೆ ಸಮಸ್ಯೆಗಳಿವೆ. ಮಾನವೀಯ ವಿಚಾರಗಳೂ ಕೂಡ ಇದೆ. 
ಇದೀಗ ಭಾರತ ಮತ್ತು ಪಾಕಿಸ್ತಾನ ಸಿಂಧೂ ನದಿ ನೀರು ವಿವಾದ ಕುರಿತಂತೆ ಮಾತುಕತೆ ನಡೆಸುತ್ತಿದ್ದೆ ಎಂದಾದರೆ ಮುಂದೊಂದು ದಿನ ರಸ್ತೆ ಮಾರ್ಗ ತೆರೆಯುವ ಬಗ್ಗೆಯೂ ಮಾತುಕತೆ ನಡೆಸುತ್ತವೆ. ರಸ್ತೆ ಮಾರ್ಗ ತೆರೆಯುವ ಹಿನ್ನಲೆಯಲ್ಲಿಯೇ ಬಿಜೆಪಿ ಹಾಗೂ ಪಿಡಿಪಿ ಮೈತ್ರಿಗೊಂಡಿತ್ತು. ಉಭಯ ರಾಷ್ಟ್ರಗಳ ನಡುವೆ ಮಾತುಕತೆ ಆರಂಭವಾಗಿ ಪರಿಸ್ಥಿತಿ ಸುಧಾರಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. 
SCROLL FOR NEXT