ಹೊಸ ಶಿಕ್ಷಣ ನೀತಿ ರಚನೆ ಅಂತಿಮಗೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕು: ಹೆಚ್ ಆರ್ ಡಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹೊಸ ಶಿಕ್ಷಣ ನೀತಿ ರಚನೆ ಅಂತಿಮಗೊಳ್ಳಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ಎಂದು ಹೆಚ್ ಆರ್ ಡಿ ಸಚಿವಾಲಯ ಹೇಳಿದೆ.
ಶಿಕ್ಷಣ ವ್ಯವಸ್ಥೆಯ ಪರಿವರ್ತನೆಗಾಗಿ ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ಶಿಕ್ಷಣ ನೀತಿಯ ಬಗ್ಗೆ ಮಾನವ ಸಂಪನ್ಮೂಲ ಇಲಾಖೆಯ ರಾಜ್ಯ ಸಚಿವ ಮಹೇಂದ್ರನಾಥ್ ಪಾಂಡೆ, ಹೊಸ ಶಿಕ್ಷಣ ನೀತಿ ರಚನೆ ಅಂತಿಮಗೊಳ್ಳಲು ಸ್ವಲ್ಪ ಸಮಯ ಅಗತ್ಯವಿದ್ದು, ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಹೊಸ ನೀತಿ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಹೊಸ ಶಿಕ್ಷಣ ನೀತಿ ರಚನೆಯ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಅಂತಿಮಗೊಳಿಸಲು ಇನ್ನಷ್ಟು ಸಮಯ ಅಗತ್ಯವಿದೆ ಎಂದು ಪಾಂಡೆ ಹೇಳಿದ್ದಾರೆ. ಟಿಎಸ್ ಆರ್ ಸುಬ್ರಹ್ಮಣಿಯನ್ ನೇತೃತ್ವದ ಸಮಿತಿ ರಚಿಸಿದಂತೆಯೇ ಹೊಸ ಶಿಕ್ಷಣ ನೀತಿಯ ಕರಡನ್ನು ಅಂತಿಮಗೊಳಿಸಲು ಹೆಚ್ ಆರ್ ಡಿ ಸಚಿವಾಲಯ ಹೊಸ ಸಮಿತಿಯನ್ನು ರಚಿಸಲಿದೆ. ಶಿಕ್ಷಣ ನೀತಿಗೆ ಸಂಬಂಧಿಸಿದಂತೆ 2016 ರ ಮೇ ತಿಂಗಳಲ್ಲಿ ಟಿಎಸ್ ಆರ್ ಸುಬ್ರಹ್ಮಣಿಯನ್ ನೇತೃತ್ವದ ಸಮಿತಿ ಕೆಲವು ಬದಲಾವಣೆಗಳನ್ನು ಸೂಚಿಸಿತ್ತು.
5 ನೇ ತರಗತಿ ವರೆಗೂ ವಿದ್ಯಾರ್ಥಿಗಳನ್ನು ಫೇಲ್ ಮಾಡಬಾರದು ಹಾಗೂ ನಂತರದ ತರಗತಿಗಳಿಂದ ವಿದ್ಯಾರ್ಥಿಗಳು ಅತ್ಯಂತ ಕಡಿಮೆ ಅಂಕ ಗಳಿಸಿದರೆ ಫೇಲ್ ಮಾಡಬಹುದೆಂದು ಸಮಿತಿ ಸಲಹೆ ನೀಡಿತ್ತು.