ದೇಶ

'ಇವಿಎಂ' ಗೋಲ್'ಮಾಲ್ ಆರೋಪ: ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ಕಿಡಿ

Manjula VN
ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಇವಿಎಂ (ವಿದ್ಯುನ್ಮಾನ ಮತ ಯಂತ್ರ) ಗೋಲ್'ಮಾಲ್ ನಡೆಯಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಬಿಜೆಪಿ ಗುರುವಾರ ತೀವ್ರವಾಗಿ ಕಿಡಿಕಾಡಿದೆ. 
ವಿರೋಧ ಪಕ್ಷಗಳ ಆರೋಪ ಹಾಗೂ ಟೀಕೆಗಳಿಗೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು, ಉತ್ತರಪ್ರದೇಶ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಹಿನ್ನಲೆಯಲ್ಲಿ ಬಿಎಸ್'ಪಿ. ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳು ಇದೀಗ ಇವಿಎಂ ಕುರಿತ ಪ್ರಶ್ನೆಗಳನ್ನು ಎತ್ತುತ್ತಿವೆ ಎಂದು ಹೇಳಿದ್ದಾರೆ. 
ಗೆದ್ದರೆ ಎಲ್ಲವೂ ಸರಿಯಿರುತ್ತದೆ. ಇವಿಎಂ ಕೂಡ ಸರಿಯುತ್ತದೆ. ಆದರೆ, ಸೋತಾಗ ಮಾತ್ರ ಸರ್ಕಾರ ಇವಿಎಂನಲ್ಲಿ ಗೋಲ್ ಮಾಲ್ ಮಾಡಿದೆ ಎಂದು ಹೇಳುತ್ತಾರೆ. ನಿಮ್ಮ ಈ ತರ್ಕವಾದವನ್ನು ಮೆಚ್ಚಲೇಬೇಕು ಎಂದು ವ್ಯಂಗ್ಯವಾಡಿದ್ದಾರೆ. 
ಈ ಹಿಂದೆ ಸಾಕಷ್ಟು ಚುನಾವಣೆಗಳು ನಡೆದಿವೆ. ಆಗಲೂ ಇವಿಎಂ ಬಳಸಲಾಗಿದೆ. ಆಗೆಲ್ಲಾ ಗೆಲವು ಸಾಧಿಸಿದ್ದಾಗ ಈ ರೀತಿಯ ಪ್ರಶ್ನೆಗಳನ್ನೇಕೆ ಎತ್ತಲಿಲ್ಲ ಎಂದು ಪ್ರಶ್ನಿಸಿದರು. ರವಿ ಶಂಕರ್ ಪ್ರಸಾದ್ ಅವರು ಈ ಪ್ರಶ್ನೆ ಕೇಳುತ್ತಿದ್ದಂತೆಯೇ ಸಚಿವರ ಪ್ರತಿಕ್ರಿಯೆಗೆ ತೃಪ್ತಿಗೊಳ್ಳದ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. 
ನಂತರ ಮಾತನಾಡಿದ ಪ್ರಸಾದ್ ಅವರು, ಈ ಮೂರು ಪಕ್ಷಗಳು ಇವಿಎಂ ನಿಂದ ಸೋಲು ಕಂಡಿಲ್ಲ. ಜನರೇ ಅವರನ್ನು ತಿರಸ್ಕರಿಸಿದ್ದಾರೆ. ಈ ಸತ್ಯವನ್ನು ಆಯಾ ಪಕ್ಷಗಳು ಒಪ್ಪಿಕೊಳ್ಳಬೇಕಿದೆ. ಇವಿಎಂ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇವಿಎಂ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿಲ್ಲ ಎಂದ ವಿರೋಧ ಪಕ್ಷಗಳ ವಾದಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. 
SCROLL FOR NEXT