ಲಕ್ನೋ: ಉತ್ತರ ಪ್ರದೇಶ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಮಗ ಪ್ರತೀಕ್ ಯಾದವ್ ಮತ್ತವರ ಪತ್ನಿ ಅಪರ್ಣಾ ಯಾದವ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ವಿವಿಐಪಿ ಗೆಸ್ಟ್ ಹೌಸ್ ನಲ್ಲಿ ವಾಸವಿರುವ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ ದಂಪತಿ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಲಕ್ನೋ ಕಂಟೋನ್‌ಮೆಂಟ್ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಅಪರ್ಣಾ ಯಾದವ್ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ರೀಟಾ ಬಹುಗುಣ ಎದುರು 33 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು.
ಮುಲಾಯಂ ಸಿಂಗ್ ಅವರ ಮಗನಾಗಿದ್ದರೂ ಪ್ರತೀಕ್ ಯಾದವ್ ಮತ್ತು ಅಪರ್ಣಾ ಯಾದವ್ ಅವರಿಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅಭಿಮಾನವಿದೆ ಎಂದು ಹೇಳಲಾಗುತ್ತಿದೆ.