ದೇಶ

ಉತ್ತರ ಪ್ರದೇಶ: ಕರ್ತವ್ಯ ಲೋಪ ಆರೋಪ, 100ಕ್ಕೂ ಹೆಚ್ಚು ಪೊಲೀಸರ ಅಮಾನತು!

Srinivasamurthy VN

ಲಖನೌ: ಉತ್ತರ ಪ್ರದೇಶದಲ್ಲಿ ಹದಗೆಟ್ಟಿರುವ  ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತೆ ತಹಬದಿಗೆ ತರುವ ನಿಟ್ಟಿನಲ್ಲಿ ನೂತನ ಸಿಎಂ ಯೋಗಿ ಆದಿತ್ಯಾನಾಥ್ ಅವರು ಕಠಿಣ ಕ್ರಮಗಳಿಗೆ ಮುಂದಾಗಿದ್ದು, ಕರ್ತವ್ಯಲೋಪ ಆರೋಪ  ಎದುರಿಸುತ್ತಿದ್ದ ಸುಮಾರು 100ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.

ಮೈಗಳ್ಳತನ, ಕರ್ತವ್ಯ ಲೋಪ, ಅಕ್ರಮ ಚಟುವಟಿಕೆಗಳಿಗೆ ಬೆಂಬಲ ಮತ್ತು ಭ್ರಷ್ಟಾಚಾರಾ ಆರೋಪ ಹೊತ್ತಿದ್ದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಇತರೆ ಪೊಲೀಸ್ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ.  ಗಾಜಿಯಾಬಾದ್, ಮೇರಠ್, ನೋಯ್ಡಾ, ರಾಜಧಾನಿ ಲಖನೌ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ರಾಜಧಾನಿ ಲಖನೌವೊಂದರಲ್ಲೇ ಸುಮಾರು 7  ಇನ್ಸ್ ಪೆಕ್ಟರ್ ಗಳನ್ನು ಅಮಾನತು ಮಾಡಿ ಸಿಎಂ ಯೋಗಿ ಆದೇಶ ಹೊರಡಿಸಿದ್ದಾರೆ.

ಅಮಾನತುಗೊಂಡರವರಲ್ಲಿ ಬಹುತೇಕರು ಪೊಲೀಸ್ ಪೇದೆಗಳಾಗಿದ್ದು, ಸುಧಾರಣೆ ವಿಷಯದಲ್ಲಿ ಸಿಎಂ ಯೋಗಿ ಆದಿತ್ಯಾನಾಥ್ ಅವರು ನೀಡಿರುವ ಸೂಚನೆಗಳನ್ನು ಎಲ್ಲ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು  ಉತ್ತರ ಪ್ರದೇಶ ಪೊಲೀಸ್ ಇಲಾಖೆ ಸಾರ್ವಜನಿಕ ಸಂಪರ್ಕಾಧಿಕಾರಿ ರಾಹುಲ್ ಶ್ರೀವಾತ್ಸವ್ ತಿಳಿಸಿದ್ದಾರೆ.

ನಿನ್ನೆಯಷ್ಟೇ ಸಿಎಂ ಯೋಗಿ ಆದಿತ್ಯಾನಾಥ್ ಅವರು, ಹಜರತ್ ಗಂಜ್ ಪೊಲೀಸ್ ಠಾಣೆಗೆ ದಿಢೀರ್  ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಗೃಹ ಖಾತೆಯನ್ನೂ ತಮ್ಮಲ್ಲಿಯೇ ಇರಿಸಿಕೊಂಡಿರುವ ಯೋಗಿ ಆದಿತ್ಯನಾಥ್, ಪೊಲೀಸ್  ಠಾಣೆಯಲ್ಲಿನ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪನೆ ಮಾಡಲಾಗುವುದು ಎಂದು ಹೇಳಿದ್ದರು.

SCROLL FOR NEXT