ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ನವದೆಹಲಿ: ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಅವ್ಯವಹಾರ (ಡಿಡಿಸಿಎ) ಪ್ರಕರಣ ಸಂಬಂಧ ಸಮರ್ಥನೆ ನೀಡಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಳಿ ಯಾವುದೇ ಆಧಾರಗಳಿಲ್ಲ ಎಂದು ಬಿಜೆಪಿ ಭಾನುವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಸುಧಾನ್ಶು ತ್ರಿವೇದಿಯವರು, ಇದೊಂದು ನ್ಯಾಯಾಂಗ ಪ್ರಕ್ರಿಯೆ. ಆಮ್ ಆದ್ಮಿ ಪಕ್ಷ ಪ್ರಕರಣ ಸಂಬಂಧ ವಿಚಾರಣೆಗೆ ತಡ ಮಾಡುತ್ತಿದೆ. ಇದೀಗ ಚಾರ್ಜ್ ಶೀಟ್ ದಾಖಲು ಮಾಡಲಾಗಿದ್ದು, ಶೀಘ್ರದಲ್ಲೇ ವಿಚಾರಣೆ ಆರಂಭವಾಗಲಿದೆ. ಆ ವರೆಗೂ ಆಮ್ ಆದ್ಮಿ ಪಕ್ಷ ಯಾವ ಯಾವ ಅವಹೇಳನಕಾರಿ ಹೇಳಿಕೆಯನ್ನು ನೀಡಿವೆಯೋ, ಆ ಹೇಳಿಕೆಗಳ ಬಗ್ಗೆಯೆಲ್ಲಾ ಅವರ ಬಳಿ ದಾಖಲೆಗಳಿವೆ ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದವರು ತಪ್ಪು ಆರೋಪಗಳನ್ನು ಮಾಡಿವೆ. ಪ್ರಕರಣ ಸಂಬಂಧ ನ್ಯಾಯಾಲಯ ವಿಚಾರಣೆ ನಡೆಸಿ ಆದೇಶ ನೀಡಲಿದ್ದು, ಆದೇಶದ ಬಳಿಕ ಆಮ್ ಮುಖವಾಡ ಕಳಚಿ ಬೀಳಲಿದೆ ಎಂದು ಹೇಳಿದ್ದಾರೆ.
ಅರುಣ್ ಜೇಟ್ಲಿ ಅವರು 13 ವರ್ಷಗಳ ಕಾಲ ದೆಹಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ವೇಳೆ ಭಾರೀ ಅವ್ಯವಹಾರ ನಡೆದಿರುವುದಾಗಿ ಕೇಜ್ರಿವಾಲ್ ಹಾಗೂ ಆಪ್ ಮುಖಂಡರು ಆರೋಪಿಸಿದ್ದರು. ಆದರೆ ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಹೇಳಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು 2015ರಲ್ಲಿ ಕೇಜ್ರಿವಾಲ್ ಹಾಗೂ ಆಪ್ ಮುಖಂಡರ ವಿರುದ್ಧ 10 ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಪ್ರಕರಣ ಸಂಬಂಧ ನಿನ್ನೆಯಷ್ಟೇ ವಿಚಾರಣೆ ನಡೆಸಿದ್ದ ದೆಹಲಿ ನ್ಯಾಯಾಲಯ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದಾಖಲಿಸಿರುವ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಇತರೆ ಐವರು ಎಎಪಿ ನಾಯಕರಿಗೆ ಸೂಚನೆ ನೀಡಿತ್ತು.