ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿ ನವ ಭಾರತದ ಬಗ್ಗೆ ತಮ್ಮ ದೃಷ್ಟಿಕೋನವನ್ನು ದೇಶದ ಜನತೆ ಮುಂದೆ ಹಂಚಿಕೊಂಡರು.
ತಮ್ಮ ಪ್ರತಿ ತಿಂಗಳ ಆಕಾಶವಾಣಿಯ ಮನ್ ಕೀ ಬಾತ್ ಕಾರ್ಯಕ್ರಮದ 30ನೇ ಅವತರಣಿಕೆಯಲ್ಲಿ ಮಾತನಾಡಿದ ಅವರು, ದೇಶದ 125 ಕೋಟಿ ಜನತೆಯ ಕನಸು ನನಸಾಗುವುದನ್ನು ಕಣ್ಣಲ್ಲಿ ನೋಡುವುದು ನಮ್ಮ ಆಶಯವಾಗಿದೆ.ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ನಾನು ಹೊಸ ಭಾರತದ ಅಡಿಪಾಯ ಎಂದು ಭಾವಿಸುತ್ತೇನೆ ಎಂದರು.
ನವ ಭಾರತ ಒಂದು ರಾಜಕೀಯಕ್ಕೆ ಸಂಬಂಧಪಟ್ಟ ಸರ್ಕಾರಿ ಯೋಜನೆಯಲ್ಲ. ಇದು ದೇಶದ 125 ಕೋಟಿ ಜನರ ಕನಸು. ಈ ದೇಶದ ಅಷ್ಟೂ ಜನರ ಆಸೆ-ಆಕಾಂಕ್ಷೆಗಳನ್ನು ಭಾರತದ ರೂಪಾಂತರವಾಗಿ ಮಾರ್ಪಡಿಸುವುದು ನಮ್ಮೆಲ್ಲರ ಗುರಿಯಾಗಿದೆ ಎಂದರು.
2022ರ ವೇಳೆಗೆ ನವ ಭಾರತ ನಿರ್ಮಾಣಕ್ಕೆ ದೇಶದ ಜನತೆ ಪ್ರತಿಜ್ಞೆಗೈದು ತಮ್ಮ ಜೊತೆ ಕೈಜೋಡಿಸುವಂತೆ ಮನವಿ ಮಾಡಿಕೊಂಡರು. ಇದಕ್ಕಾಗಿ ನರೇಂದ್ರ ಮೋದಿ ಆಪ್ ಕೂಡ ಆರಂಭವಾಗಿದೆ. 2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಸೃಜನಾತ್ಮಕ ಶೋಧನೆ, ಕಠಿಣ ಪರಿಶ್ರಮ ಮತ್ತು ಸ್ವಂತಿಕೆ ಮೂಲಕ ನವ ಭಾರತ ನಿರ್ಮಾಣಕ್ಕೆ ಎಲ್ಲಾ ದೇಶವಾಸಿಗಳು ಸಹಕರಿಸುವಂತೆ ಕರೆ ನೀಡಿದರು.
ಬಾಂಗ್ಲಾದೇಶದ ವಿಮೋಚನಾ ದಿನವಾದ ಇಂದು ಬಾಂಗ್ಲಾದೇಶದ ಜನತೆಗೆ ಶುಭ ಕಾಮನೆ ಸಲ್ಲಿಸಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚಂಪಾರಣ್ ಸತ್ಯಾಗ್ರಹವು ಒಂದು ಪ್ರಮುಖ ಬದಲಾವಣೆಯ ಘಟ್ಟ. 1917, ಏಪ್ರಿಲ್ 10ರಂದು ಚಂಪಾರಣ್ ಸತ್ಯಾಗ್ರಹ ಆರಂಭವಾಯಿತು. 100 ವರ್ಷ ಸಂದಿದೆ ಎಂದರು. ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಮಾರ್ಚ್ 23ರಂದು ಜೀವ ಬಲಿದಾನ ಮಾಡಿಕೊಂಡ ಭಗತ್ ಸಿಂಗ್, ರಾಜಗುರು ಮತ್ತು ಸುಖ್ ದೇವ್ ಅವರನ್ನು ಪ್ರಧಾನಿ ನೆನಪಿಸಿಕೊಂಡರು.
ಮಹಿಳೆಯರ ಹೆರಿಗೆ ರಜೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಮಹಿಳೆಯರು ಮತ್ತು ಅವರ ಮಗುವಿನ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಉತ್ತಮ ನಿರ್ಧಾರ ತಂದಿದೆ ಎಂದರು.
ದೇಶದಲ್ಲಿ ಪ್ರತಿನಿತ್ಯ ಅನೇಕ ಮಂದಿ ಆಹಾರವಿಲ್ಲದೆ ಬಳಲುತ್ತಿದ್ದಾರೆ. ಹೀಗಾಗಿ ಆಹಾರವನ್ನು ಪೋಲು ಮಾಡದಂತೆ ಮನವಿ ಮಾಡಿಕೊಂಡರು. ಯುವಜನತೆ ತಂತ್ರಜ್ಞಾನ ಬಳಸಿಕೊಂಡು ಆಹಾರಗಳು ಪೋಲಾಗದಂತೆ ತಡೆಗಟ್ಟಬೇಕು ಎಂದರು.ನಮ್ಮ ದಿನನಿತ್ಯದ ಜೀವನದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಯೋಗ ದಿನಾಚರಣೆ: ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು ಈ ವರ್ಷ ಮೂರನೇ ವರ್ಷಾಚರಣೆಯಾಗಿದೆ. ಯೋಗದ ಕಡೆಗೆ ಜನರನ್ನು ಹೆಚ್ಚೆಚ್ಚು ಆಕರ್ಷಿಸುವ ಬಗ್ಗೆ ಈಗಿನಿಂದಲೇ ಚಿಂತಿಸೋಣ, ಕಾರ್ಯಪ್ರವೃತ್ತರಾಗೋಣ ಎಂದರು.
ಭಾವನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ: ನಿಮ್ಮಲ್ಲಿ ಖಿನ್ನತೆ ಕಂಡುಬಂದರೆ, ಖಿನ್ನತೆಯಿಂದ ಬಳಲುತ್ತಿದ್ದರೆ ಬೇರೆಯವರ ಜೊತೆ ಭಾವನೆಗಳನ್ನು ಹಂಚಿಕೊಳ್ಳಿ. ಹೆಚ್ಚೆಚ್ಚು ಚಟುವಟಿಕೆಗಳಲ್ಲಿ, ನಿಮ್ಮ ಇಷ್ಟದ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಮಾನಸಿಕ ಆರೋಗ್ಯ ಮತ್ತು ಖಿನ್ನತೆ ಬಗ್ಗೆ ಮಾತನಾಡಿದ ಪ್ರಧಾನಿ, ಖಿನ್ನತೆ ಸಮಸ್ಯೆಯಿಂದ ಮನುಷ್ಯ ಹೊರಬರಲು ಸಾಧ್ಯವಿದೆ ಎಂದು ಭರವಸೆಯ ಮಾತುಗಳನ್ನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics