ನವದೆಹಲಿ: ಸಿಬ್ಬಂದಿಯನ್ನು ಚಪ್ಪಲಿಯಿಂದ ಥಳಿಸಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಅವರ ಮತ್ತೊಂದು ಟಿಕೆಟ್ ಅನ್ನು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ರದ್ದು ಮಾಡಿದೆ.
ಮೂಲಗಳ ಪ್ರಕಾರ ಸಂಸದ ರವೀಂದ್ರ ಗಾಯಕ್ವಾಡ್ ಅವರು ಮಂಗಳವಾರ ದೆಹಲಿಗೆ ತೆರಳಲು 2 ಬಾರಿ ಟಿಕೆಟ್ ಬುಕ್ ಮಾಡಿದ್ದು, ಈ ಎರಡೂ ಟಿಕೆಟ್ ಗಳನ್ನು ರದ್ದು ಮಾಡುವ ಮೂಲಕ ಅವರ ಪ್ರಯತ್ನವನ್ನು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ವಿಫಲಗೊಳಿಸಿದೆ. ಸಂಸದ ರವೀಂದ್ರ ಗಾಯಕ್ವಾಡ್ ಅವರು ಮೊದಲು ಮುಂಬೈ ನಿಂದ ದೆಹಲಿಗೆ ಮೊದಲು ಟಿಕೆಟ್ ಬುಕ್ ಮಾಡಿದ್ದರು. ಆದರೆ ಅವರ ಹೆಸರು ಏರ್ ಇಂಡಿಯಾ ಸಂಸ್ಥೆಯ ಕಪ್ಪುಪಟ್ಟಿಯಲ್ಲಿದ್ದುದರಿಂದ ಎಚ್ಚೆತ್ತ ಸಿಬ್ಬಂದಿ ಟಿಕೆಟ್ ಬುಕಿಂಗ್ ಅನ್ನು ಕ್ಷಣ ಮಾತ್ರದಲ್ಲಿ ರದ್ದುಗೊಳಿಸಿದ್ದಾರೆ. ಸಂಸದ ರವೀಂದ್ರ ಗಾಯಕ್ವಾಡ್ ಅವರ ತವರು ಕ್ಷೇತ್ರ ಒಸ್ಮಾನಾಬಾದ್ ನಿಂದ ಕೇವಲ 300 ಕಿಮೀ ದೂರದಲ್ಲಿ ಹೈದರಾಬಾದ್ ನಗರವಿದ್ದು, ಅಲ್ಲಿಂದ ದೆಹಲಿಗೆ ಪ್ರಯಾಣಿಸುವ ಅವರ ಪ್ರಯತ್ನಕ್ಕೆ ಮತ್ತೆ ಏರ್ ಇಂಡಿಯಾ ಅಡ್ಡಿಯಾಗಿದೆ.
ಏರ್ ಇಂಡಿಯಾ ಕಾಲ್ ಸೆಂಟರ್ ಮೂಲಕ ಸಂಸದ ರವೀಂದ್ರ ಗಾಯಕ್ವಾಡ್ ಅವರು ಈ ಟಿಕೆಟ್ ಬುಕ್ಕಿಂಗ್ ಮಾಡಿಸಿದ್ದರು ಎಂದು ತಿಳಿದುಬಂದಿದೆ. ಟಿಕೆಟ್ ರದ್ದಾಗುತ್ತಿದ್ದಂತೆಯೇ ಬಳಿಕ ಹೈದರಾಬಾದ್ ನಿಂದ ದೆಹಲಿಗೆ ಸಂಸದರು ಟಿಕೆಟ್ ಬುಕ್ ಮಾಡಿದ್ದು, ಇದನ್ನೂ ಏರ್ ಇಂಡಿಯಾ ಸಂಸ್ಥೆ ರದ್ದುಗೊಳಿಸಿದೆ, ಅಲ್ಲದೆ ಎಲ್ಲ ಟಿಕೆಟ್ ಬುಕ್ಕಿಂಗ್ ಗಳನ್ನೂ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದು, ಸಂಸದ ರವೀಂದ್ರ ಗಾಯಕ್ವಾಡ್ ಮಾಡಿರಬಹುದಾದ ಟಿಕೆಟ್ ಗಳನ್ನು ರದ್ದು ಮಾಡುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ರವೀಂದ್ರ ಗಾಯಕ್ವಾಡ್ ಅವರ ಹೆಸರನ್ನು ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲೂ ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು, ಅವರ ಹೆಸರು ದಾಖಲಾಗುತ್ತಿದ್ದಂತೆಯೇ ಟಿಕೆಟ್ ರದ್ದಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಏರ್ ಇಂಡಿಯಾ ಸಿಬ್ಬಂದಿಯನ್ನು ಚಪ್ಪಲಿಯಿಂದ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಡರೇಷನ್ ಅಫ್ ಇಂಡಿಯನ್ ಏರ್ ಲೈನ್ಸ್ ಸಂಸ್ಥೆ ಸಂಸದ ರವೀಂದ್ರ ಗಾಯಕ್ವಾಡ್ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಅಲ್ಲದೆ ಬಹುತೇಕ ಎಲ್ಲ ವಿಮಾನಯಾನ ಸಂಸ್ಥೆಗಳೂ ಕೂಡ ರವೀಂದ್ರ ಗಾಯಕ್ವಾಡ್ ಅವರ ವಿಮಾನ ಪ್ರಯಾಣವನ್ನು ರದ್ದುಗೊಳಿಸಿದ್ದವು.