ದೇಶ

ಉತ್ತರ ಪ್ರದೇಶ: ಗೆದ್ದೆತ್ತಿನ ಬಾಲ ಹಿಡಿಯುವ ಪಕ್ಷಾಂತರಿಗಳಿಗೆ ನೋ ಎಂಟ್ರಿ ಬೋರ್ಡ್ ಹಾಕಿದ ಬಿಜೆಪಿ!

Srinivas Rao BV
ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಹವಾ ಜೋರಾಗಿಯೇ ಇದ್ದು, ವಿರೋಧ ಪಕ್ಷದ ನಾಯಕರೂ ಸಹ ಬಿಜೆಪಿ ಸೇರ್ಪಡೆಗೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ವಿರೋಧ ಪಕ್ಷದ ಹಲವು ಮುಖಂಡರು ಈಗಾಗಲೇ ಬಿಜೆಪಿ ಸೇರುವುದಕ್ಕೆ ಅರ್ಜಿಯನ್ನೂ ಹಾಕಿದ್ದಾರೆ. ಆದರೆ ಬಿಜೆಪಿ ಮಾತ್ರ ಸುಲಭವಾಗಿ ಅವರುಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ತಯಾರಿಲ್ಲ. 
ಈ ಕಾರಣಕ್ಕಾಗಿಯೇ ಗೆದ್ದೆತ್ತಿನ ಬಾಲ ಹಿಡಿಯುವ ಪಕ್ಷಾಂತರಿಗಳಿಗೆ ಬಿಜೆಪಿ ಮುಂದಿನ 6 ತಿಂಗಳ ಕಾಲ ನೋ ಎಂಟ್ರಿ ಬೋರ್ಡ್ ಹಾಕಿ, ಪಕ್ಷದಲ್ಲಿ ಜಾಗ ಖಾಲಿ ಇಲ್ಲ ಎಂಬ ಸಂದೇಶ ರವಾನೆ ಮಾಡಿದೆ. ಇಂಡಿಯನ್ ಎಕ್ಸ್ ಪ್ರೆಸ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ಬಿಜೆಪಿ ಸೇರಲು ಸಿದ್ಧವಿರುವ ವಿರೋಧ ಪಕ್ಷದ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಉತ್ತರ ಪ್ರದೇಶ ನಾಯಕರಿಗೆ ಸೂಚನೆ ನೀಡಿದ್ದು, ಇನ್ನೂ 6 ತಿಂಗಳ ಕಾಲ ವಿರೋಧ ಪಕ್ಷದ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬಾರದೆಂದು ಹೇಳಿದೆ.
ಬಿಜೆಪಿಯೇತರ ಪಕ್ಷದಲ್ಲಿ ಗುರುತಿಸಿಕೊಂಡಿರುವ ಜಿಲ್ಲಾ ಪಂಚಾಯತ್ ನ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ನಗರ ಪಂಚಾಯಿತಿ ಅಧ್ಯಕ್ಷರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕದ ತಟ್ಟುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರೂ ಸಹ  ಈ ಪಟ್ಟಿಯಲ್ಲಿ ಇದ್ದಾರಂತೆ. 
SCROLL FOR NEXT