ದೇಶ

ನಿಷೇಧಿತ ನೋಟ್ ಬದಲಾವಣೆ ಮಾಡಲು ಸಹಾಯ ಮಾಡಿ: ಪ್ರಧಾನಿಗೆ ಲೈಂಗಿಕ ಕಾರ್ಯಕರ್ತೆ ಟ್ವೀಟ್

Lingaraj Badiger
ನವದೆಹಲಿ: ಕಳೆದ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ಮುಖ ಬೆಲೆಯ ನೋಟ್ ಗಳನ್ನು ನಿಷೇಧಿಸಿದ ನಂತರ ದೇಶದ ಸಾಮಾನ್ಯ ಜನ ಹಣಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅದರ ಬಿಸಿ ಬಾಂಗ್ಲಾದೇಶದ ಲೈಂಗಿಕ ಕಾರ್ಯಕರ್ತರೊಬ್ಬರಿಗೆ ತಡವಾಗಿ ತಟ್ಟಿದ್ದು, ನಿಷೇಧಿತ 10 ಸಾವಿರ ರುಪಾಯಿ ವಿನಿಮಯಕ್ಕಾಗಿ ಪರದಾಡುತ್ತಿದ್ದಾರೆ.
ಮಿಡ್ ಡೇ ವರದಿಯ ಪ್ರಕಾರ, ವ್ಯಕ್ತಿಯೊಬ್ಬನಿಂದ ವಂಚನೆಗೆ ಒಳಗಾಗಿ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಬಾಂಗ್ಲಾ ಯುವತಿ ತಮ್ಮಲ್ಲಿರುವ 10 ರುಪಾಯಿ ಮೌಲ್ಯದ ಹಳೆ ನೋಟ್ ಗಳನ್ನು ಬದಲಾಯಿಸಿಕೊಳ್ಳಲು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು, ಪುಣೆ, ಮುಂಬೈಯಲ್ಲಿ ವಿವಿಧ ಸಮಸ್ಯೆಗಳಿಗೆ ಸಿಲುಕಿ, ಈಗ ರೆಸ್ಕ್ಯೂ ಫೌಂಡೇಷನ್ ಸಂಸ್ಥೆಯ ಸಹಾಯದಿಂದ ರಕ್ಷಿಸಲ್ಪಟ್ಟ ಈ ಯುವತಿಯ ಪತ್ರವನ್ನು ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ಯಾಗ್ ಸಂಸ್ಥೆ ಟ್ವೀಟ್ ಮಾಡಿದೆ.
ಪತ್ರದಲ್ಲಿ, ಮೂರು ವರ್ಷದ ತನ್ನ ವೈವಾಹಿಕ ಜೀವನ ಹಾದಿ ತಪ್ಪಿದ್ದರಿಂದ ಪತಿಗೆ ವಿಚ್ಛೇದನ ನೀಡಿ, ಹೊಟ್ಟೆಪಾಡಿಗಾಗಿ ಗಾರ್ಮೆಂಟ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಸಹೋದ್ಯೋಗಿಯೊಬ್ಬ ಭಾರತದಲ್ಲಿ ಉತ್ತಮ ಕೆಲಸ ಕೊಡಿಸುವುದಾಗಿ ಹೇಳಿ ಇಲ್ಲಿಗೆ ಕಳುಹಿಸಿದ್ದ. ಕೆಲಸಕ್ಕೆಂದು ಇಲ್ಲಿಗೆ ಬಂದಾಗ ತನ್ನನ್ನು ಮಹಿಳೆಯೊಬ್ಬರಿಗೆ ಮಾರಿದ ವಿಷಯ ತಡವಾಗಿ ಗಮನಕ್ಕೆ ಬಂತು ಎಂದು ಯುವತಿ ವಿವರಿಸಿದ್ದಾಳೆ.
ಮೊದಲು ಮಹಾರಾಷ್ಟ್ರದ ಮುಂಬೈಗೆ ಬಂದಿಳಿದಿ ನನ್ನನ್ನು ಬಳಿಕ ಬೆಂಗಳೂರಿಗೂ ಕರೆತರಲಾಗಿತ್ತು. ಅಲ್ಲಿ ಸ್ವಲ್ಪ ಕಾಲವಿರಿಸಿ ನಂತರ ಬಾಂಗ್ಲಾದೇಶಕ್ಕೆ ತೆರಳಲು ನೆರವು ನೀಡುವುದಾಗಿ ಹೇಳಿ ಪುಣೆಯಲ್ಲಿ ಇರಿಸಲಾಗಿತ್ತು. ಇಲ್ಲಿಂದ ಸರ್ಕಾರೇತರ ಸಂಸ್ಥೆಯೊಂದು ತನ್ನನ್ನು ರಕ್ಷಿಸಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ. ಅಲ್ಲದೆ ಗ್ರಾಹಕರು ನೀಡಿದ ಟಿಪ್ಸ್ ಹಾಗೂ ದುಡಿದ ಹಣ ಸೇರಿ ತನ್ನ ಬಳಿ 10 ಸಾವಿರ ರುಪಾಯಿ ಮೌಲ್ಯದ ನಿಷೇಧಿತ ನೋಟ್ ಗಳಿದ್ದು, ಇದನ್ನು ಬದಲಾಯಿಸಲು ಮತ್ತು ಬಾಂಗ್ಲಾಗೆ ಮರಳಲು ಸಹಾಯ ಮಾಡುವಂತೆ ಪ್ರಧಾನಿಗೆ ಮನವಿ ಮಾಡಿದ್ದಾಳೆ.
SCROLL FOR NEXT